ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಮುಗಿದಿದ್ದು ಮಾಧ್ಯಮಗಳಲ್ಲಿ ಬಂದಿರುವ ಮತದಾನೋತ್ತರ ಸಮೀಕ್ಷಾ ವರದಿ ಬೇಕಿಲ್ಲ, ಈ ಹಿಂದಿನ ಎಕ್ಸಿಟ್ ಪೋಲ್ ಸಮೀಕ್ಷೆಗಳೆಲ್ಲ ಉಲ್ಟಾ ಹೊಡೆದಿದ್ದವು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸರ್ವೆಗಳ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಎಕ್ಸಿಟ್ ಪೋಲ್ ಸರ್ವೆಗಳ ಕುರಿತು ಟ್ವೀಟ್ ಮಾಡಿರುವ ಬಿ ಎಲ್ ಸಂತೋಷ್, ಬಿಜೆಪಿಗೆ 2014 ರಲ್ಲಿ 282, 2019 ರಲ್ಲಿ 303, 2022 ರಲ್ಲಿ 157 ಸ್ಥಾನ ಸಿಗುತ್ತೆ ಎಂದು ಯಾವ ಎಕ್ಸಿಟ್ ಪೋಲ್ ಸಹ ಭವಿಷ್ಯ ನುಡಿದಿರಲಿಲ್ಲ. ಆದರೆ, ಆಗೆಲ್ಲ ಎಕ್ಸಿಟ್ ಪೋಲ್ ಸಮೀಕ್ಷೆಗಳು ಉಲ್ಟಾ ಹೊಡೆದಿದ್ದವು. 2018 ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿಯು 14 ಕ್ಷೇತ್ರಗಳ 24 ಸಾವಿರ ಬೂತ್ಗಳಲ್ಲಿ ಲೀಡ್ ಪಡೆದಿರಲಿಲ್ಲ. ಈ ಸಲ ಬಿಜೆಪಿಗೆ 31 ಸಾವಿರ ಬೂತ್ಗಳಲ್ಲಿ ಲೀಡ್ ಬರಲಿದೆ ಎಷ್ಟು ಸ್ಥಾನ ಗೆಲ್ತೀವಿ ಅಂತ ಸಮೀಕ್ಷೆ ನಡೆಸಿದವರಿಗೆ ಊಹಿಸಲು ಸಾಧ್ಯವಾಗಿರಲಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಇದನ್ನು ಓದಿ:ರಾಜ್ಯದಲ್ಲಿ ಶೇ 72.81 ವೋಟಿಂಗ್, ಚಿಕ್ಕಬಳ್ಳಾಪುರದಲ್ಲಿ ಅತ್ಯಧಿಕ; ಬೆಂಗಳೂರಲ್ಲಿ ನಿರಾಸಕ್ತಿ
ಸದ್ಯ ರಾಜ್ಯ ನಾಯಕರು ಜಿಲ್ಲೆಗಳಲ್ಲಿದ್ದು ಬೆಂಗಳೂರಿನ ಕಡೆ ಮುಖ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬ ಸಮೇತ ಸವದತ್ತಿಗೆ ತೆರಳಿದ್ದು ವಿಶೇಷ ಪೂಜೆ ಸಲ್ಲಿಸಿ ಬೆಂಗಳೂರಿಗೆ ಬರಲಿದ್ದಾರೆ. ಮಧ್ಯಾಹ್ನದ ವೇಳೆಗೆ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಕೂಡ ಬೆಂಗಳೂರು ತಲುಪಲಿದ್ದು, ಇಂದು ಮಧ್ಯಾಹ್ನದ ನಂತರ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಲಿವೆ ಎಂದು ಹೇಳಿದರು.