ಬೆಂಗಳೂರು: ಕಾಂಗ್ರೆಸ್ ನಾಯಕತ್ವದ ಮೇಲೆ ಗಂಭೀರ ಆರೋಪಗಳನ್ನು ಮಾಡಿ, ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್ ವಿರುದ್ಧ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಸಂಕಷ್ಟದಲ್ಲಿಲ್ಲ, ಇಡೀ ದೇಶವೇ ಕವಲು ದಾರಿಯಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬರುವ ರೀತಿ ನಡೆದುಕೊಳ್ಳಲಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಅವರು ರಾಜೀನಾಮೆ ನೀಡುವ ಮೂಲಕ ಸೋಲನ್ನು ಒಪ್ಪಿಕೊಂಡಂತಾಗಿದೆ ಎಂದರು.
ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಇದು ಗುಲಾಂ ನಬಿ ಆಜಾದ್ ಅವರಿಗೆ ಗೌರವ ತಂದುಕೊಡುವುದಿಲ್ಲ. ರಾಷ್ಟ್ರ ಹಾಗೂ ಪಕ್ಷ ಎರಡೂ ಕಷ್ಟದಲ್ಲಿರುವಾಗ ಇವರ ಈ ನಡೆ ಹೇಡಿತನದ್ದು. ಯಾವುದೋ ಒಂದು ಅಜೆಂಡಾ ಇಟ್ಟುಕೊಂಡು ರಾಜೀನಾಮೆ ಕೊಟ್ಟಂತೆ ಕಾಣಿಸುತ್ತದೆ. ಸಾಮೂಹಿಕ ನಾಯಕತ್ವದಲ್ಲಿದ್ದ ಪಕ್ಷ ನಮ್ಮದು, ಹೀಗೆ ಮಾಡಬಾರದಿತ್ತು. ಅವರು 35 ವರ್ಷಗಳ ಕಾಲ ಸರ್ಕಾರದ ಆತಿಥ್ಯ ಅನುಭವಿಸಿದವರು. ರಾಜೀನಾಮೆಯಿಂದ ಅವರಿಗೆ ನಷ್ಟವೇ ಹೊರತು ಪಕ್ಷಕ್ಕಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಗುಲಾಬ್ ನಬಿ ರಾಜೀನಾಮೆಯಿಂದ ಕೋಮುವಾದಿ ಶಕ್ತಿಗಳಿಗೆ ಪರೋಕ್ಷ ಸಹಕಾರ: ಖರ್ಗೆ