ಬೆಂಗಳೂರು:ಕರ್ನಾಟಕದಲ್ಲಿ ಗೋಧ್ರಾ ದುರಂತದ ರೀತಿ ಮತ್ತೊಂದು ಘಟನೆ ಆಗಬಹುದು ಎಂದು ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಮಗೆ ಮಾಹಿತಿ ಸಿಗ್ತಾ ಇದೆ. ಮಾಹಿತಿ ಇದ್ದೇ ಹೇಳ್ತಾ ಇದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಪಕ್ಷದ ನಿಲುವಿಗೂ ನನ್ನ ಹೇಳಿಕೆಗೂ ಸಂಬಂಧ ಇಲ್ಲ. ಕೆಲವು ರಾಜ್ಯಗಳಿಂದ ನನಗೆ ಮಾಹಿತಿ ಬರುತ್ತಿದೆ. ಕೆಲವು ಸಂಘಟನೆಗಳು ಮೀಟಿಂಗ್ ಮಾಡುತ್ತಿವೆ. ಅವುಗಳ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ಭದ್ರತೆ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ಭದ್ರತೆ ನೀಡಬೇಕು. ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು.
ರಾಮ ಮಂದಿರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮ ಅಲ್ಲ. ಇದೊಂದು ರಾಜಕೀಯ ಕಾರ್ಯಕ್ರಮ ಆಗ್ತಿದೆ. ಧಾರ್ಮಿಕ ಕಾರ್ಯಕ್ರಮ ಆಗಿದ್ರೆ ನಾವೆಲ್ಲರೂ ಹೋಗುತ್ತಿದ್ದೆವು. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ಧಾರ್ಮಿಕ ಮುಖಂಡರು ಭಾಗಿ ಆಗಬೇಕಿತ್ತು. ಶಂಕರಾಚಾರ್ಯರು ಮೂಲ ಗುರುಗಳು. ಅದೇ ರೀತಿ ಧರ್ಮ ಗುರುಗಳು ನಡೆಸಿಕೊಟ್ಟಿದ್ದರೆ ಅದು ಧಾರ್ಮಿಕ ಕಾರ್ಯಕ್ರಮ ಆಗುತ್ತಿತ್ತು. ಮೋದಿಯ ಧರ್ಮವೇ ಇನ್ನೂ ಯಾವುದು ಅಂತ ಗೊತ್ತಾಗಿಲ್ಲ. ಅಮಿತ್ ಶಾ ಧರ್ಮವೇ ಯಾವುದೂ ಅಂತ ಗೊತ್ತಾಗಿಲ್ಲ ಎಂದು ಕಿಡಿಕಾರಿದರು.
ಹೋರಾಟಕ್ಕೂ ಅಪರಾಧಕ್ಕೂ ವ್ಯತ್ಯಾಸ ಇದೆ. ಕರಸೇವಕ ಅಂತ ಯಾವುದೋ ಅಪರಾಧ ಪ್ರಕರಣದಲ್ಲಿ ಇರುವವರನ್ನು ಹಾಗೆಯೇ ಬಿಡಲು ಆಗುವುದಿಲ್ಲ. ಬಂಧಿತನ ಮೇಲೆ 13 ಕೇಸ್ ಇವೆ. ಕಾನೂನು ಬಾಹಿರ ಅಪರಾಧ ಮಾಡಿದ್ದಾರೆ. ಧರ್ಮದ ಹೆಸರಲ್ಲಿ ಏನೇನು ಕೆಲಸ ಮಾಡಿದ್ದಾರೆ ಅಂತ ಗೊತ್ತಿದೆ. ಬಿಜೆಪಿಯವರು ಈಗ ಬೊಬ್ಬೆ ಹೊಡೆಯುತ್ತಿದ್ದಾರೆ. ಶಾಂತಿ ಕದಡುವ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲೇಬೇಕು ಎಂದರು.
30 ವರ್ಷ ಅವರನ್ನು ಬಿಟ್ಟಿದ್ದೇ ತಪ್ಪು. ಎಲ್ ಕೆ ಅಡ್ವಾಣಿಯವರ ಮೇಲೆ ಇರುವ ಕೇಸೇ ಇನ್ನೂ ಕ್ಲಿಯರ್ ಆಗಿಲ್ಲ. ಇದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಇಷ್ಟು ದಿನ ಹಳೆ ಕೇಸ್ ಮೇಲೆ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಹಾಗೇ ಬಿಟ್ಟಿದ್ದೇ ತಪ್ಪು ಎಂದು ಅಭಿಪ್ರಾಯಪಟ್ಟರು.