ಬೆಂಗಳೂರು: ಕಳೆದ ರಾತ್ರಿ 189 ಹೆಸರುಳ್ಳ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಇನ್ನೆರಡು ದಿನದಲ್ಲಿ ಎರಡನೇ ಹಾಗು ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಎರಡನೇ ಪಟ್ಟಿಯನ್ನೂ ವರಿಷ್ಠರೇ ಬಿಡುಗಡೆ ಮಾಡಲಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಹಂತದ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಇನ್ನೆರಡು ದಿನದಲ್ಲಿ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ. ಬಹುತೇಕ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ. ನಾಳೆ/ನಾಡಿದ್ದು ವರಿಷ್ಠರು ಎರಡನೇ ಪಟ್ಟಿಯನ್ನೂ ಬಿಡುಗಡೆ ಮಾಡುತ್ತಾರೆ ಎಂದರು.
ಮೊದಲ ಹಂತದ ಪಟ್ಟಿ ಬಿಡುಗಡೆ ಬಳಿಕ ಪಕ್ಷದಲ್ಲಿ ಬಂಡಾಯ ವಿಚಾರದ ಕುರಿತು ಪ್ರತಿಕ್ರಿಯಿಸಿ, ಪಕ್ಷದಲ್ಲಿ ಎಲ್ಲರಿಗೂ ಅವರ ನೋವು, ಸಂಕಟ ತೋಡಿಕೊಳ್ಳುವ ಅವಕಾಶ ಇದೆ. ಅಭ್ಯರ್ಥಿಗಳ ಪಟ್ಟಿ ಘೋಷಣೆಯಾದ ಬಳಿಕ ಇವೆಲ್ಲ ಸರ್ವೇ ಸಾಮಾನ್ಯ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಚುನಾವಣೆಯನ್ನು ನಾವು ಎದುರಿಸಿ ಗೆಲ್ಲುತ್ತೇವೆ. ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದೇವೆ ಎಂದು ಹೇಳಿದರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸ್ಪರ್ಧಿಸುವಂತೆ ಸವಾಲು ಹಾಕಿದ ಕಾಂಗ್ರೆಸ್ಗೆ ತಿರುಗೇಟು ಕೊಟ್ಟ ಕಟೀಲ್, ಅವರಿಬ್ಬರೂ ಮೊದಲು ಈಗ ನಾವು ಹಾಕಿರುವ ಎರಡು ಅಭ್ಯರ್ಥಿಗಳನ್ನು ಎದುರಿಸಲಿ. ಅಶೋಕ್, ಸೋಮಣ್ಣ ವಿರುದ್ಧ ಇಬ್ಬರೂ ಗೆದ್ದು ಬರಲಿ. ಆಮೇಲೆ ನೋಡೋಣ ಎಂದರು.
ಇದನ್ನೂ ಓದಿ :ಕಾರ್ಪೊರೇಟರ್ ನಟರಾಜ್ ಕೊಲೆ ಪ್ರಕರಣ: 11 ವರ್ಷಗಳ ಬಳಿಕ ಆರೋಪಿಗಳು ದೋಷಮುಕ್ತ
ಸೈಲೆಂಟ್ ಸುನೀಲ್ ಬೆಂಬಲಿಗರ ಆಕ್ರೋಶ:ಸಂಜೆಯಷ್ಟೇ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ್ದ ಚಾಮರಾಜಪೇಟೆ ಟಿಕೆಟ್ ಆಕಾಂಕ್ಷಿ ಸೈಲೆಂಟ್ ಸುನೀಲ್ ಬೆಂಬಲಿಗರು ರಾತ್ರಿ ಮತ್ತೆ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದರು. ರಾಜ್ಯಾಧ್ಯಕ್ಷರಿಗೆ ದೂರು ನೀಡಿದರು. ಚಾಮರಾಜಪೇಟೆ ಮಂಡಲ ಅಧ್ಯಕ್ಷ ಮನವಿ ಸ್ವೀಕರಿಸಿ ಹೈಕಮಾಂಡ್‌ಗೆ ಮಾಹಿತಿ ನೀಡುವುದಾಗಿ ತಿಳಿಸಿದರು. ರಾಜ್ಯಾಧ್ಯಕ್ಷರು ಮುತ್ತಿಗೆ ಹಾಕಲು ಬಂದಿದ್ದವರನ್ನು ಸಮಾಧಾನಪಡಿಸಿ ಕಳಿಸಿದರು. ಇದೇ ವೇಳೆ ಚಾಮರಾಜಪೇಟೆ ಅಭ್ಯರ್ಥಿ ಭಾಸ್ಕರ್ ರಾವ್ಗೆ ಕಟೀಲ್ ಬಿ ಫಾರಂ ವಿತರಿಸಿದರು. ಈ ವಿಷಯ ತಿಳಿದ ಪ್ರತಿಭಟನಾಕಾರರು ಭಾಸ್ಕರ್ ರಾವ್ ಬಿ ಫಾರಂ ಪಡೆದುಕೊಂಡರೆ, ಸೈಲೆಂಟ್ ಸುನೀಲ್ಗೆ ಸಿ ಫಾರಂ ಕೊಡಿಸಿ ಚುನಾವಣೆಗೆ ನಿಲ್ಲಿಸುತ್ತೇವೆಂದು ಘೋಷಣೆ ಹಾಕಿದರು.
ಇದನ್ನೂ ಓದಿ:ಭಾಸ್ಕರ್ ರಾವ್ ವಿರುದ್ಧ ಆಕ್ರೋಶ: ಸೈಲೆಂಟ್ ಸುನೀಲ್ ಬೆಂಬಲಿಗರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ