ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. ಬೆಂಗಳೂರು: ಹೈದರಾಬಾದ್ನಲ್ಲಿ ಮೈಸೂರು ಸ್ಯಾಂಡಲ್ ನಕಲಿ ಸೋಪ್ ತಯಾರಿಕೆ ಘಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆ ನಡೆಸುತ್ತಿದ್ದ ರಾಕೇಶ್ ಜೈನ್, ಮಹಾವೀರ್ ಜೈನ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅವರಿಬ್ಬರು ಸಹ ಬಿಜೆಪಿಯ ಸಕ್ರಿಯ ಕಾರ್ಯಕರ್ತರು ಮತ್ತು ನಾಯಕರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ತೆಲಂಗಾಣ ಬಿಜೆಪಿ ನಾಯಕ ರಾಜಾಸಿಂಗ್ ಜೊತೆಗೆ ಆ ಇಬ್ಬರು ಗುರುತಿಸಿಕೊಂಡಿದ್ದಾರೆ ಎಂದು ದೂರಿದರು.
ಮೈಸೂರು ಸ್ಯಾಂಡಲ್ ಹೆಸರಲ್ಲಿ ನಕಲಿ ಸೋಪ್: ಬೃಹತ್ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರಿಗೆ ಅನಾಮಿಕನೊಬ್ಬ ಕರೆ ಮಾಡಿ, ಮೈಸೂರು ಸ್ಯಾಂಡಲ್ ಹೆಸರಲ್ಲಿ ನಕಲಿ ಸೋಪ್ ಮಾರಾಟದ ಬಗ್ಗೆ ಮಾಹಿತಿ ನೀಡಿದ್ದನು. ಎಂ ಬಿ ಪಾಟೀಲ್ ಅವರು ಇಲ್ಲಿನ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟದ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ನೀಡಿದ್ದರು. ನಂತರ ನಮ್ಮ ಅಧಿಕಾರಿಗಳು ನಕಲಿ ಸೋಪ್ ತಯಾರಿಕೆ ಮತ್ತು ಮಾರಾಟ ಜಾಲ ಪತ್ತೆ ಹಚ್ಚಲು ಮುಂದಾದರು.
ಅಧಿಕಾರಿಗಳು ಹೈದರಾಬಾದ್ ಗೆ ತೆರಳಿ 25 ಲಕ್ಷ ರೂ. ಆರ್ಡರ್ ಇದೆ. ಬಹಳ ದೊಡ್ಡ ಆರ್ಡರ್ ಆಗಿರುವುದರಿಂದ ಕಾರ್ಖಾನೆಗೆ ಬರುತ್ತೇವೆ ಎಂದು ನಮ್ಮ ಅಧಿಕಾರಿಗಳು ಹೇಳಿದ್ದರು. ಬಹಳ ಸೂಕ್ಷ್ಮವಾಗಿ ಕಾರ್ಯಾಚರಣೆ ನಡೆಯುತ್ತದೆ. ನಕಲಿ ಎಂದು ಖಚಿತ ಬಳಿಕ ನಮ್ಮ ಅಧಿಕಾರಿಗಳು ಕಾರ್ಖಾನೆ ಮೇಲೆ ದಾಳಿ ಮಾಡಿದ್ದರು. ಈ ವೇಳೆ ನಕಲಿ ಸೋಪ್ ಮತ್ತು ಕವರ್ಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು.
ಈ ಪ್ರಕರಣ ಸಂಬಂಧ ರಾಕೇಶ್ ಜೈನ್, ಮಹಾವೀರ್ ಜೈನ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿತ್ತಾಪುರದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಹಾಗೂ ಮಾಜಿ ಶಾಸಕರ ಪುತ್ರನ ಜೊತೆ ಆರೋಪಿಗಳ ಸಂಪರ್ಕವಿದೆ. ರಾಜ್ಯದ ಆಸ್ತಿ ಉಳಿಸಿಕೊಳ್ಳಲು ಕಾರ್ಯಾಚರಣೆ ನಡೆಸಲಾಗಿದೆ. ಇದರಲ್ಲಿ ಬಿಜೆಪಿ ನಾಯಕರು ಶಾಮೀಲಾಗಿದ್ದಾರೆ. ಬಿಜೆಪಿಯವರು ದುಡ್ಡು ಮಾಡಲು ಯಾವುದಕ್ಕೂ ಹೇಸುವುದಿಲ್ಲ ಎಂದು ಯೋಗಿ ಆದಿತ್ಯನಾಥ್ ಜೊತೆಗಿರುವ ಫೋಟೋವನ್ನು ಪ್ರಿಯಾಂಕ್ ಖರ್ಗೆ ಪ್ರದರ್ಶಿಸಿದರು.
ಮೇಕ್ ಇನ್ ಇಂಡಿಯಾಗಿಂತ ಮುಂಚೆ ಮೈಸೂರು ಸ್ಯಾಂಡಲ್ ಕಾರ್ಖಾನೆ ಹುಟ್ಟಿದೆ. ಮೈಸೂರು ಮಹಾರಾಜರ ಕಾಲದಲ್ಲಿ ಸ್ಥಾಪಿತ ಅಂಥ ಸಂಸ್ಥೆಯ ವಿರುದ್ಧ ಇಂತ ಕುತಂತ್ರ ನಡೆದಿದೆ ವಿಶ್ವದಲ್ಲಿಯೇ ಹೆಸರು ಮಾಡಿದ ಪ್ರಾಡೆಕ್ಟ್ ನಮ್ಮದು. ಬಿಜೆಪಿ ನಾಯಕರು ಇಂತಹ ಕೆಲಸ ಮಾಡ್ತಾರೆ. ಕೋವಿಡ್ ವೇಳೆ ಹೆಣದ ಮೇಲೆ ಹಣ ಹೊಡೆದವರು ಎಂದು ಖರ್ಗೆ ಆರೋಪಿಸಿದ್ರು.
ಗರೀಬ್ ಕಲ್ಯಾಣ್ ಅಕ್ಕಿ: ರಾಜ್ಯದ ಆಸ್ತಿ ಮಾರಾಟ ಮಾಡುವವರಿಗೆ ಬಿಜೆಪಿ ಟಿಕೆಟ್ ನೀಡುತ್ತದೆ. ಯಾದಗಿರಿಯಲ್ಲಿ 700 ಕ್ವಿಂಟಾಲ್ ಗರೀಬ್ ಕಲ್ಯಾಣ್ ಅಕ್ಕಿ ಬಿಜೆಪಿಯವರ ಗೊಡೌನ್ನಲ್ಲಿ ಸಿಕ್ಕಿದೆ. ಅಕ್ಕಿ ಕದ್ದವರನ್ನು ಪ್ರಧಾನಿ ಮೋದಿ ಪಕ್ಷದಲ್ಲಿ ಯಾಕೆ ಇಟ್ಕೊಂಡಿದ್ದೀರಿ? ಅವರ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ತೆಲಂಗಾಣ ಡಿಸಿಎಂ ಜೊತೆಗೆ ತನಿಖೆ ಮಾಡುವ ಬಗ್ಗೆ ಮಾತನಾಡಿದ್ದೇವೆ. ಆರೋಪಿತರ ತಪ್ಪಿಲ್ಲ ಅಂತ ಬಿಜೆಪಿಯವರು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಇಷ್ಟು ದಿನ ಅನಂತ್ ಕುಮಾರ್ ಹೆಗಡೆ ಎಲ್ಲಿದ್ರು:ಇಷ್ಟು ದಿನ ಅನಂತ್ ಕುಮಾರ್ ಹೆಗಡೆ ಎಲ್ಲಿದ್ರು. ನಮ್ಮ ನಾಯಕರನ್ನು ಬೈಯುವುದೇ ಅವರ ಕೆಲಸ. ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಸಚಿವರಾಗಿದ್ದರು. ಎಷ್ಟು ಜನರಿಗೆ ಅವರು ಉದ್ಯೋಗ ಕೊಟ್ಟಿದ್ದರು. ಅವರು ಚರ್ಚೆಗೆ ಬರಲಿ ಎಂದಿದ್ದಾರಲ್ಲಾ?, ಬಿಜೆಪಿಯವರು ಯಾರೂ ರಾಮಾಯಣ ಓದಿಲ್ಲ. ಬಿಜೆಪಿಯವರಿಗೆ 4 ಸಾಲು ಹನುಮಾನ್ ಚಾಲೀಸಾ ಕೂಡ ಬರಲ್ಲ. ಬಿಜೆಪಿಯವರಿಗೆ ಪ್ರಾಣ ಪ್ರತಿಷ್ಠಾಪನೆಯ ಅರ್ಥವೇ ಗೊತ್ತಿಲ್ಲ. ಶಂಕರಾಚಾರ್ಯರ ಪೀಠದ ಶ್ರೀಗಳ ಪ್ರಶ್ನೆಗೆ ಉತ್ತರ ಕೊಡಲಿ ಸಾಕು. ಬಿಜೆಪಿ ನಾಯಕರಿಗೆ ಕಾಂಗ್ರೆಸ್ನವರು ಪ್ರಶ್ನೆ ಕೇಳುತ್ತಿಲ್ಲ. ಶಂಕರಾಚಾರ್ಯರು ಕೇಳಿದ ಪ್ರಶ್ನೆಗೆ ಬಿಜೆಪಿಯವರು ಉತ್ತರ ಕೊಡಲಿ ಎಂದು ಟೀಕಾ ಪ್ರಹಾರ ನಡೆಸಿದರು.
ಯಾದಗಿರಿಯಲ್ಲಿ ಅಕ್ಕಿ ಸಿಕ್ಕಿದೆ. ಮಣಿಕಂಠ್ ರಾಠೋಡ್ ಸಹೋದರನಿಗೆಸೇರಿದ್ದಂತೆ. ಅವರು ಯಾರ ಮೇಲೂ ಕ್ರಮ ಜರುಗಿಸಲಿಲ್ಲ. ಬಿಜೆಪಿ ವ್ಯವಹಾರ ರೌಡಿಗಳ ಕೈಯಲ್ಲಿದೆ. ಸ್ಯಾಂಟ್ರೋ ರವಿ, ಫೈಟರ್ ರವಿ, ಸೈಲೆಂಟ್ ಸುನೀಲ್ ನಂತವರ ಕಡೆ ಇದೆ. ಹಿಂದಿನಿಂದಲೂ ನಕಲಿ ಜಾಲ ನಡೆಸ್ತಿದ್ದಾರೆ. ಇದರಿಂದ ಬಿಜೆಪಿಗೆ ಲಾಭ ಹೋಗ್ತಿದೆ. ಈ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಉತ್ತರ ಕೊಡಬೇಕು ಎಂದು ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ರಾಮಂದಿರ ಭೇಟಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಅವರು ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ನಾವು ದೇವಸ್ಥಾನಗಳಿಗೆ ಹೋಗ್ತೇವೆ. ಯಾವಾಗ ಭಕ್ತಿ ಬರುತ್ತದೋ ಆಗ ಹೋಗ್ತೇವೆ. ನಾನು ಹೆಚ್ಚಾಗಿ ದೇವಸ್ಥಾನಗಳಿಗೆ ಹೋಗಲ್ಲ. ಯಾರಾದ್ರೂ ಕರೆದರೆ ಹೋಗುತ್ತೇನೆ ಎಂದಿದ್ದಾರೆ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಇದನ್ನೂಓದಿ:'ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ' ಯತೀಂದ್ರ ಹೇಳಿಕೆ ಮೂಲಕ ಡಿಕೆಶಿಗೆ ಸಂದೇಶ ರವಾನೆ: ಪ್ರತಾಪ್ ಸಿಂಹ