ಬೆಂಗಳೂರು :ಆರ್.ಆರ್. ನಗರ ಹಾಗೂ ಶಿರಾ ಕ್ಷೇತ್ರ ಎರಡೂ ಕಡೆ ಗೆದ್ದೇ ಗೆಲ್ಲುತ್ತೇವೆ. ಶಿರಾದಲ್ಲಿ ಮೊದಲ ಬಾರಿಗೆ ಬಿಜೆಪಿಯ ಕಮಲ ಅರಳುತ್ತದೆ ಎಂಬ ವಿಶ್ವಾಸವಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರ್.ಆರ್.ನಗರದಲ್ಲಿನ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸ್ವ-ಗ್ರಾಮಗಳಿಗೆ ಮರು ವಲಸೆ ಹೋಗಿದ್ದರು. ಹಾಗಾಗಿ ಆರ್.ಆರ್.ನಗರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಇಲ್ಲಿ ಕಾಂಗ್ರೆಸ್ ಓಟ್ ಬ್ಯಾಂಕ್ ಎಂದು ನಂಬಿದ್ದವರು ಮತ ಚಲಾವಣೆ ಮಾಡಿಲ್ಲ. ಆದರೆ, ಸ್ಥಳೀಯರು ಹಾಗೂ ಬಿಜೆಪಿಯ ಪಾರಂಪರಿಕ ಮತದಾರರೆಲ್ಲಾ ಬಂದು ಓಟ್ ಮಾಡಿದ್ದಾರೆ. ಇದರಿಂದಾಗಿ ಆರ್.ಆರ್.ನಗರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಕನಿಷ್ಠ 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರು.
ಡಿ.ಕೆ.ರವಿಯವರ ತಾಯಿಯಿಂದ ಹೇಳಿಕೆ ಕೊಡಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಸಹೋದರರ ಗಿಮಿಕ್ ಅಷ್ಟೆ. ಡಿ.ಕೆ.ರವಿಯವರ ತಾಯಿ ಬೇಕಾದರೆ ಮಾಧ್ಯಮಗಳ ಮುಂದೆ ಬಂದು ಹೇಳಬೇಕಾಗಿತ್ತು. ಆದರೂ ಅವರ ಸಂಸಾರ ಸರಿಹೋಗಲಿ. ಕಿತ್ತಾಡಿಕೊಂಡಿರುವ ಅತ್ತೆ-ಸೊಸೆ ಸರಿಹೋಗಲಿ ಎಂದು ನಾವು ಬಯಸುತ್ತೇವೆ ಎಂದರು.
ರಾಜ್ಯದಲ್ಲೂ ಲವ್ ಜಿಹಾದ್ ಪ್ರಕರಣಗಳು ಆಗುತ್ತಿವೆ. ಲವ್ ಮಾಡಿ ಮದುವೆಯಾಗಿ ಮತಾಂತರ ಮಾಡಲೆಂದೇ ಯುವಕರಿಗೆ ತರಬೇತಿ ನೀಡುವ, ಬೈಕ್, ಬಟ್ಟೆ ಕೊಡಿಸುವ ಗುಂಪುಗಳು ರಾಜ್ಯದಲ್ಲಿ ಸಕ್ರಿಯವಾಗಿವೆ. ಲವ್ ಜಿಹಾದ್ಗೆ ಬಲಿಯಾಗಿ ಬದುಕು ಬರ್ಬಾದ್ ಮಾಡಿಕೊಳ್ಳುವ ಹೆಣ್ಣು ಮಕ್ಕಳ ರಕ್ಷಣೆಗಾಗಿ, ಕರ್ನಾಟಕದಲ್ಲೂ ಉತ್ತರ ಪ್ರದೇಶ ಮಾದರಿಯಲ್ಲಿ ಕಾನೂನು ತರಬೇಕು. ಈ ಸಂಬಂಧ ಗೃಹ ಸಚಿವರು ಮತ್ತು ಸಿಎಂ ಜತೆ ಮಾತನಾಡುತ್ತೇನೆ ಎಂದು ಹೇಳಿದರು.