ಬೆಂಗಳೂರು: ಚಾಮರಾಜಪೇಟೆಗೆ ನಾನು ಹೊಸಬನಲ್ಲ, ಸ್ಥಳೀಯ ನಿವಾಸಿಯಾದ ನನಗೆ ಪಕ್ಷ ಟಿಕೆಟ್ ನೀಡಿದೆ. 30 ವರ್ಷದಿಂದ ಅರಳದ ಕಮಲ ಈ ಬಾರಿ ಅರಳಲಿದೆ. ಮೇ 10 ರಂದು ಇದಕ್ಕೆ ಉತ್ತರ ಸಿಗಲಿದೆ ಎಂದು ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ಹೇಳಿದರು.
ಇಂದು ಆರ್.ಟಿ ನಗರದಲ್ಲಿರುವ ಸಿಎಂ ನಿವಾಸಕ್ಕೆ ಭೇಟಿ ನೀಡಿ ಸಿಎಂಗೆ ಧನ್ಯವಾದ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ 189 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಇದರಲ್ಲಿ ನನಗೂ ಸುವರ್ಣ ಅವಕಾಶ ಸಿಕ್ಕಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ,ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರಿಗೆ ಚಿರ ಋಣಿ. ಬಿಜೆಪಿ ಪಕ್ಷದಲ್ಲಿ ಸಿದ್ದಾಂತ, ರಾಷ್ಟ್ರೀಯತೆ ಇರುವುದರಿಂದ ಈ ಪಕ್ಷಕ್ಕೆ ಸೇರಿದ್ದೇನೆ ಎಂದರು.
ಚಾಮರಾಜಪೇಟೆಯಲ್ಲಿ ಟಿಕೆಟ್ ಆಕಾಂಕ್ಷಿ ಸುನೀಲ್, ವೆಂಕಟೇಶ್ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಭಾಸ್ಕರ್ ರಾವ್, ಯಾವುದೇ ಅಸಮಾಧಾನವಿಲ್ಲ. ಹಾಗೇನಾದರೂ ಇದ್ದರೆ ಆ ನಾಯಕರನ್ನ ಭೇಟಿ ಮಾಡುತ್ತೇನೆ. ನಾಯಕರ ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ಎಲ್ಲ ನಾಯಕರ ಬೆಂಬಲವಿದೆ ಒಟ್ಟಾಗಿ ಗೆಲ್ಲುವ ವಿಶ್ವಾಸವಿದೆ ಎಂದರು.
ಚಾಮರಾಜಪೇಟೆಯಲ್ಲಿ ಸೈಲೆಂಟ್ ಸುನೀಲ್ ಪಕ್ಷೇತರರಾಗಿ ಸ್ಪರ್ಧೆ ಮಾಡಲಿದ್ದು, ಇಲ್ಲಿ ಮಾಜಿ ಐಪಿಎಸ್ ವರ್ಸಸ್ ರೌಡಿಶೀಟರ್ ಸ್ಪರ್ಧೆ ನಡೆಯುತ್ತಾ ಎನ್ನುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಬೇರೆ ಪೊಲೀಸ್ ಇಲಾಖೆ ಬೇರೆ. ಈಗಾಗಲೇ ಪೊಲೀಸ್ ಇಲಾಖೆ ಬಿಟ್ಟು ಆಗಿದೆ. ಅದೇ ಬೇರೆ ಚಾಪ್ಟರ್, ಇದೇ ಬೇರೆ ಚಾಪ್ಟರ್. ಸಂವಿಧಾನದ ಅಡಿ ಯಾರ್ಯಾರಿಗೆ ಅವಕಾಶವಿದೆಯೋ ಅವರನ್ನು ಗೌರವಿಸುವುದು ನನ್ನ ಕರ್ತವ್ಯ. ಏನು ಕೇಸ್ ಇದೆ, ಇಲ್ಲ ಅನ್ನೋದೆ ಸೆಕೆಂಡರಿ. ಸಂವಿಧಾನ ಅವರಿಗೆ ಒಂದು ಅವಕಾಶ ಕೊಟ್ಟಿದೆ. ಸಂವಿಧಾನದ ಅಡಿ ವೇದಿಕೆಯಲ್ಲಿ ಸರಿಸಮಾನರಾಗಿದ್ದೇವೆ. ಪೊಲೀಸ್ ಬ್ಯಾಗೆಜ್ ತಗೊಂಡು ರಾಜಕೀಯಕ್ಕೆ ಬಂದರೆ ಸರಿಹೋಗಲ್ಲ. ಅದು ಈಗ ಮುಗಿದ ಅಧ್ಯಾಯ ಎಂದರು.
ಮಾ.1ರಂದು ಬಿಜೆಪಿಗೆ ಸೇರ್ಪಡೆ:ಆಮ್ ಆದ್ಮಿ ಪಕ್ಷಕ್ಕೆ ಗುಡ್ ಬೈ ಹೇಳಿದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮಾ.1ರಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದ್ದರು. ಭಾಸ್ಕರ್ ರಾವ್ ಜತೆ ಅವರ ಬೆಂಬಲಿಗರು ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಆಮ್ ಆದ್ಮಿ ಪಕ್ಷದ ಕಾರ್ಯವೈಖರಿಯಲ್ಲಿ ಬೆಳವಣಿಗೆ ಕಂಡು ಬಾರದ ಹಿನ್ನೆಲೆಯಲ್ಲಿ ರಾಷ್ಟ್ರೀಯವಾದದ ಸನಾತನ ಪರವಾದ ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬಿಜೆಪಿಗೆ ಸೇರುತ್ತಿದ್ದೇನೆ. ಬಿಜೆಪಿ ನಾಯಕರ ಸದೃಢ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ನನ್ನ ಕೊಡುಗೆ ನೀಡುತ್ತೇನೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ತಿಳಿಸಿದ್ದರು.
ಇದನ್ನೂ ಓದಿ:ಸನಾತನ ಧರ್ಮ, ರಾಷ್ಟ್ರೀಯತೆಗೆ ನಾನು ಬದ್ಧನಾಗಿ ಬಿಜೆಪಿಗೆ ಸೇರಿದ್ದೇನೆ: ಭಾಸ್ಕರ್ ರಾವ್