ಕರ್ನಾಟಕ

karnataka

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 130 ಸ್ಥಾನ ಗೆಲ್ಲುತ್ತೆ: ಕಾಂಗ್ರೆಸ್​ಗೆ ಯಡಿಯೂರಪ್ಪ ಟಾಂಗ್​

By

Published : Sep 27, 2020, 1:48 AM IST

ಮುಂದಿನ ಚುನಾವಣೆಯಲ್ಲಿ 130 ಸ್ಥಾನ ಬರುವ ವಿಶ್ವಾಸ ಇದೆ. ನೀವು 10 ವರ್ಷ ವಿರೋಧ ಪಕ್ಷದಲ್ಲಿರಬೇಕು. ನಿಮ್ಮ ಸ್ಥಿತಿ ಏನಿದೆ ನೋಡಿ. ನಿಮಗೆ ಲೋಕಸಭೆಯಲ್ಲಿ ಇರುವುದು ಕೇವಲ 40 ಸ್ಥಾನ. ನಿಮ್ಮ ಕಾಲದಲ್ಲಿ ಬರ ಇತ್ತು. ನಮ್ಮ ಕಾಲದಲ್ಲಿ ಒಳ್ಳೆ ಮಳೆ ಆಗುತ್ತಿದೆ. ಜಲಾಶಯಗಳು ತುಂಬಿವೆ ಎಂದು ಸಿಎಂ ಯಡಿಯೂರಪ್ಪ ಅವಿಶ್ವಾಸ ನಿರ್ಣಯಕ್ಕೆ ಸೋಲಾಗುತ್ತಿದ್ದಂತೆ ಕಾಂಗ್ರೆಸ್​ಗೆ ತಿರುಗೇಟು ನೀಡಿದರು.

BS yadiyurappa
ಯಡಿಯೂರಪ್ಪ

ಬೆಂಗಳೂರು: ಸರ್ಕಾರದ ವಿರುದ್ಧ ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯ ಸದನದಲ್ಲಿ ತಿರಸ್ಕೃತವಾಗಿದೆ. ಅವಿಶ್ವಾಸ ನಿರ್ಣಯ‌ ಮೇಲಿನ ಚರ್ಚೆ ಬಳಿಕ ನಿರ್ಣಯವನ್ನು ಧ್ವನಿ‌ಮತಕ್ಕೆ ಹಾಕಲಾಯಿತು. ಧ್ವನಿಮತದಲ್ಲಿ ನಿರೀಕ್ಷೆಯಂತೆಯೇ ಯಡಿಯೂರಪ್ಪ ಸರ್ಕಾರಕ್ಕೆ ಹೆಚ್ಚಿನ ಧ್ವನಿಮತ ಬಿತ್ತು. ಆ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಂಡಿಸಿದ್ದ ಅ‌ವಿಶ್ವಾಸ ನಿರ್ಣಯ ತಿರಸ್ಕೃತವಾಯಿತು.

ಇದಕ್ಕೂ ಮುನ್ನ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಗೆ ಉತ್ತರಿಸಿದ ಸಿಎಂ ಯಡಿಯೂರಪ್ಪ, ನಮ್ಮ ಪಕ್ಷ ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳ ಪೈಕಿ 25 ಸ್ಥಾನಗಳಲ್ಲಿ ಜಯಗಳಿಸಿದೆ. ಜನರ ವಿಶ್ವಾಸ ಇಲ್ಲದೆ ಗೆಲ್ಲುವುದಕ್ಕೆ ಆಗುತ್ತಾ? ಉಪಚುನಾವಣೆಯಲ್ಲೂ 12 ಸ್ಥಾನ ಗೆದಿದ್ದೇವೆ. ಜನರಿಗೆ ವಿಶ್ವಾಸವಿಲ್ಲದೆ ಗೆಲ್ಲಿಸುತ್ತಾರಾ? ಎಂದು ಪ್ರಶ್ನಿಸಿದರು.

ಮುಂದಿನ ಚುನಾವಣೆಯಲ್ಲಿ 130 ಸ್ಥಾನ ಗೆದ್ದು ಬರುವ ವಿಶ್ವಾಸ ಇದೆ. ನೀವು 10 ವರ್ಷ ವಿರೋಧ ಪಕ್ಷದಲ್ಲಿರಬೇಕು. ನಿಮ್ಮ ಸ್ಥಿತಿ ಏನಿದೆ ನೋಡಿ. ನಿಮಗೆ ಲೋಕಸಭೆಯಲ್ಲಿ ಇರುವುದು ಕೇವಲ 40 ಸ್ಥಾನ. ನಿಮ್ಮ ಕಾಲದಲ್ಲಿ ಬರ ಇತ್ತು. ನಮ್ಮ ಕಾಲದಲ್ಲಿ ಒಳ್ಳೆ ಮಳೆ ಆಗುತ್ತಿದೆ. ಜಲಾಶಯಗಳು ತುಂಬಿವೆ ಎಂದು ತಿರುಗೇಟು ನೀಡಿದರು.

ನಿಮ್ಮ ಸರ್ಕಾರ ಇದ್ದಾಗ ಭ್ರಷ್ಟಾಚಾರದಲ್ಲಿ ತೊಡಗಿ, ಜನರು ನಿಮಗೆ ಶಾಪ ಹಾಕುತ್ತಿದ್ದರು. ಅದಕ್ಕಾಗಿ ನಿಮಗೆ ಜನ‌ ಸೋಲುಣಿಸಿದ್ದಾರೆ. ಮುಂದಿನ ಚುನಾವಣೆ ವೇಳೆ ಇದೇ ಆರೋಪವನ್ನು ಜನರ ಮುಂದಿಡಿ. ನಾನು ಅಲ್ಲಿಯೂ ಗೆದ್ದು ಬರುತ್ತೇನೆ. ಮುಂದಿನ ಚುನಾವಣೆಯಲ್ಲೂ 130 ಸೀಟು ಗೆಲುತ್ತೇವೆ. ನೀವು ಇನ್ನೂ 10 ವರ್ಷ ವಿರೋಧ ಪಕ್ಷದಲ್ಲೇ ಇರುತ್ತೀರ ಎಂದು ಸವಾಲು ಹಾಕಿದರು.

ವಾರದ ಹಿಂದೆ ಪ್ರಧಾನಿ ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ. ಸುಮಾರು ಅರ್ಧ ತಾಸಿಗೂ ಹೆಚ್ಚು ಸಮಯ ನಮ್ಮ ಅಹವಾಲನ್ನು ಕೇಳಿದ್ದಾರೆ. ನಾನು ಕೇಳಿದ ಅನುದಾನವೆಲ್ಲವೂ ಮಂಜೂರು ಆಗುತ್ತದೆ ಎಂಬ ವಿಶ್ವಾಸ ಇದೆ ಎಂದರು.

ಅರೋಪ ಸಾಬೀತಾದರೆ ರಾಜಕೀಯ ನಿವೃತ್ತಿ:

ಕುಟುಂಬದ ಮೇಲಿನ ಆರೋಪವನ್ನು ಸಾಬೀತು ಮಾಡುವ ಜವಾಬ್ದಾರಿ ನಿಮ್ಮ ಮೇಲೆ ಇದೆ. ಅದು ಸತ್ಯವಾದರೆ ನಾನು ರಾಜಕೀಯದಿಂದ ನಿವೃತ್ತಿ ಯಾಗುತ್ತೇನೆ ಎಂದು ಸಿಎಂ ಇದೇ ವೇಳೆ ಸವಾಲು ಹಾಕಿದರು.

ವಿಜಯೇಂದ್ರ ಮೇಲಿನ ಆರೋಪ ಇರಲಿ, ಮತ್ತೊಂದು ಏನಾದ್ರೂ ಇರಲಿ. ನೀವೇ ಪ್ರೂವ್ ಮಾಡಿ. ತಪ್ಪಿದ್ದರೆ ರಾಜೀನಾಮೆ ನೀಡ್ತೇನೆ ಅಂತ ಹೇಳಿದ್ದೇನೆ. ಅದರಂತೆ ನಾನು ರಾಜೀನಾಮೆ ನೀಡುತ್ತೇನೆ. ನೀವು ಹೈಕೋರ್ಟ್ ಅಥವಾ ಮತ್ತೊಂದು ತನಿಖೆಗೆ ನೀವೇ ಹೋಗಿ. ಆರೋಪ ಸಾಬೀತಾಗದೇ ಹೋದರೆ ನೀವು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸವಾಲು ಹಾಕಿದರು.

ಡಿ.ಜೆ.ಹಳ್ಳಿ ಗಲಭೆ ಪೂರ್ವ ನಿಯೋಜಿತ:

ಡಿ.ಜೆ.ಹಳ್ಳಿ ಗಲಭೆ ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.

ಡಿ.ಜೆ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಸಿಎಂ ಪರವಾಗಿ ಉತ್ತರ ನೀಡಿದ ಅವರು, ಫೇಸ್​​ಬುಕ್​ನಲ್ಲಿ ಅವಹೇಳನಕಾರಿ ವ್ಯಂಗ್ಯ ಚಿತ್ರ ಪೋಸ್ಟ್ ಮಾಡಿಸಿದ ನವೀನ್ ವಿರುದ್ಧ ದೂರು ದಾಖಲಾಗುತ್ತಿದ್ದ ಹಾಗೇ ಕೂಡಲೇ ಆತನ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಯಾವುದೇ ನಿರ್ಲಕ್ಷ್ಯ ತೋರಿಲ್ಲ ಎಂದು ಸ್ಪಷ್ಟಪಡಿಸಿದರು.

ಅದು ಪೂರ್ವನಿಯೋಜಿತ ಕೃತ್ಯವಾಗಿದೆ. ಎಲ್ಲವನ್ನೂ ಯೋಜಿತವಾಗಿ ಮಾಡಲಾಗಿದೆ. ಎಲ್ಲಾ ರಸ್ತೆ ಬಂದ್ ಮಾಡೋದು, ಆರು ಸಾವಿರ ಜನ‌ಜಮಾವಣೆ ಆಗುವುದು, ಪೊಲೀಸ್ ಠಾಣೆ ಬೆಂಕಿ ಹಚ್ಚೋದು ಎಲ್ಲವೂ ನಿಯೋಜಿತ ಕೃತ್ಯವಾಗಿದೆ ಎಂದು ಆರೋಪಿಸಿದರು.

ಶಾಸಕರಾದ ಜಮೀರ್, ರಿಜ್ವಾನ್ ಸೇರಿದ್ದ ಜನರ ಮನವೊಲಿಸುವ ಯತ್ನ ಮಾಡಿದ್ದಾರೆ. ಆದರೆ ಯಾರೂ ಅವರ ಮನವಿಯನ್ನು ಕೇಳಲಿಲ್ಲ. ಸುಮಾರು ಆರು ಸಾವಿರ ಜನ ಪೊಲೀಸರ‌ ಮೇಲೆ‌ ಹಲ್ಲೆ‌ ಮಾಡಿ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದರು‌. ಪೊಲೀಸರನ್ನೇ ಗುರಿಯಾಗಿಸಿದರು ಎಂದು ತಿಳಿಸಿದರು.

ಕಮಿಷನರ್, ಡಿಸಿಪಿಗೆ ಹೊಡೆಯಲು ಮುಂದಾಗುತ್ತಾರೆ. ಆಗ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಕಾಂಗ್ರೆಸ್​​ನವರು ಮನಸ್ಸು ಮಾಡಿದ್ರೆ ಕಾರ್ಪೊರೇಟರ್, ಶಾಸಕ ಅಖಂಡ ಶ್ರೀನಿವಾಸ್ ಇಬ್ಬರನ್ನು ಕೂರಿಸಿ ಸಮಾಧಾನ ಮಾಡಬಹುದಿತ್ತೆನೋ ಎಂದು ಕಾಂಗ್ರೆಸ್​​ಗೆ ತಿರುಗೇಟು ನೀಡಿದರು.

ಗಲಭೆ ಪ್ರಕರಣ ಸಂಬಂಧ ಯಾವ ಮುಗ್ದರನ್ನೂ ಪೊಲೀಸರು ಬಂಧಿಸಿಲ್ಲ. ಸಿಸಿಟಿವಿ ಕ್ಯಾಮರಾದ ಆಧಾರದಲ್ಲಿ ಗಲಭೆಕೋರರನ್ನು ಬಂಧಿಸಲಾಗಿದೆ. ಯಾವ ಮುಗ್ದರನ್ನೂ ಬಂಧಿಸಿಲ್ಲ. ಶ್ರೀನಿವಾಸ್ ಮನೆಯನ್ನು ಯಾಕೆ ಸುಟ್ಟರು, ಡಿಸಿಪಿ ವಾಹನ, ಠಾಣೆಯನ್ನು ಏಕೆ ಬೆಂಕಿ ಹಚ್ಚಿದರು ಎಂದು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರನ್ನು ಪ್ರಶ್ನಿಸಿದರು.

ABOUT THE AUTHOR

...view details