ಕರ್ನಾಟಕ

karnataka

ETV Bharat / state

ಬಿಜೆಪಿ ರಾಮಭಕ್ತರ ನೆರವಿಗೆ ನಿಲ್ಲಲಿದೆ : ವಿಪಕ್ಷ ನಾಯಕ ಆರ್‌ ಅಶೋಕ್​ - Basavaraj bommai

ಕರಸೇವಕರ ಬಂಧನವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್​ ಅಶೋಕ್, ಮಾಜಿ ಸಚಿವ ಶ್ರೀರಾಮುಲು​ ಖಂಡಿಸಿದ್ದಾರೆ.

bjp-will-stand-for-the-help-of-ram-bhakths-says-opposition-leader-r-ashok
ರಾಮಭಕ್ತರ ನೆರವಿಗೆ ನಿಲ್ಲಲಿದೆ ಬಿಜೆಪಿ : ವಿಪಕ್ಷ ನಾಯಕ ಆರ್‌ ಅಶೋಕ

By ETV Bharat Karnataka Team

Published : Jan 2, 2024, 6:20 PM IST

ಬೆಂಗಳೂರು :ಹಳೆಯ ಪ್ರಕರಣಗಳನ್ನು ಮರು ಪರಿಶೀಲಿಸುವ ಮೂಲಕ ಕಾಂಗ್ರೆಸ್‌ ಸರ್ಕಾರ ರಾಮಭಕ್ತರಲ್ಲಿ ಭಯ ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದೆ. ಆದರೆ ರಾಮಭಕ್ತರ ನೆರವಿಗೆ ಬಿಜೆಪಿ ನಿಲ್ಲಲಿದೆ. ಇದಕ್ಕೆ ಯಾರೂ ಅಂಜಬೇಕಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌ ಅಶೋಕ್​ ತಿಳಿಸಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮ ಜನ್ಮಭೂಮಿ ಹೋರಾಟದಲ್ಲಿ ನಾನು ಕೂಡ ಪಾಲ್ಗೊಂಡಿದ್ದೇನೆ. ಕರಸೇವೆಗೆ ಯಾರು ಹೋಗಿದ್ದಾರೆ ಎಂದು ಈಗ ಪೊಲೀಸರು ಹುಡುಕುತ್ತಿದ್ದಾರೆ. ಈ ಮೂಲಕ ರಾಮಭಕ್ತರಿಗೆ ಸಂದೇಶ ನೀಡುತ್ತಿದ್ದಾರೆ. ರಾಮಮಂದಿರ ಉದ್ಘಾಟಿಸುವ ಸಮಯದಲ್ಲೇ ಹಳೆ ಪ್ರಕರಣ ಪರಿಶೀಲನೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಈ ರೀತಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಆದರೆ ರಾಮಭಕ್ತರಿಗೆ ಕಷ್ಟ ಬರದಂತೆ ಬಿಜೆಪಿ ಅವರ ನೆರವಿಗೆ ನಿಲ್ಲಲಿದೆ ಎಂದು ತಿಳಿಸಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಲು 20 ದಿನ ಬಾಕಿ ಇದೆ. ಪ್ರತಿ ಮನೆಗಳಲ್ಲಿ ದೀಪ ಹಚ್ಚಿ, ಮಂತ್ರಾಕ್ಷತೆ ವಿತರಿಸಿ ಸಂಭ್ರಮಾಚರಣೆಯಾಗುತ್ತಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದು, ರಾಜ್ಯದಲ್ಲಿ ಕೋಟ್ಯಂತರ ಜನರು ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಈ ಬಗ್ಗೆ ಹೇಳಿ, ಏನೋ ಅಪರಾಧ ಮಾಡುತ್ತಿದ್ದೇವೆ ಎಂಬಂತೆ ಮಾತಾಡುತ್ತಿದ್ದಾರೆ. ರಾಜ್ಯದಲ್ಲಿ ದೊಡ್ಡ ಆಚರಣೆ ಆಗುತ್ತಿದೆ ಎಂದು ಕಾಂಗ್ರೆಸ್‌ ನಾಯಕರಿಗೆ ಭಯ ಬಂದಿದೆ. ಇದು ಲೋಕಸಭೆ ಚುನಾವಣೆಗೆ ಅಡ್ಡಿಯಾಗಬಹುದೆಂಬ ಅಭಿಪ್ರಾಯ ಅವರಿಗೆ ಬಂದಿದೆ ಎಂದರು.

ಇದು 31 ವರ್ಷದ ಹಳೆಯ ಪ್ರಕರಣ. ಇದರಲ್ಲಿ ಮೂರ್ನಾಲ್ಕು ಜನರು ಮೃತಪಟ್ಟಿದ್ದಾರೆ. ಇಷ್ಟಿದ್ದರೂ ನೋಟಿಸ್‌ ಕೂಡ ನೀಡದೆ ಕರಸೇವಕರನ್ನು ಬಂಧಿಸಿದ್ದಾರೆ. ಒಬ್ಬ ಆಟೋ ರಿಕ್ಷಾ ಚಾಲಕ ವರ್ಷಪೂರ್ತಿ ಅಲ್ಲೇ ಆಟೋ ಚಲಾಯಿಸಿಕೊಂಡು ದುಡಿಯುತ್ತಿದ್ದಾರೆ. ಅವರನ್ನು ತಲೆಮರೆಸಿಕೊಂಡಿದ್ದಾನೆ ಎಂಬ ನೆಪ ಹೇಳಿ ಸರ್ಕಾರ ಆತನನ್ನು ಬಂಧಿಸಿದೆ. ರಾಮಮಂದಿರ ಉದ್ಘಾಟನೆಗೆ ಯಾರೂ ಹೋಗಬಾರದು ಎಂಬಂತಹ ಸ್ಥಿತಿ ನಿರ್ಮಿಸಲಾಗುತ್ತಿದೆ. ರಾಮನ ಪೂಜೆ ಮಾಡಬಾರದು ಎಂದು ಬೆದರಿಕೆ ಹಾಕುವಂತಿದೆ ಎಂದು ಅಶೋಕ್​ ಹೇಳಿದರು.

ಹಳೆ ಪ್ರಕರಣ ಎಂದ ಮೇಲೆ ಡಿಜೆ ಹಳ್ಳಿ, ಕೆಜಿ ಹಳ್ಳಿಯ ಪ್ರಕರಣ, ಪಾಪ್ಯುಲರ್‌ ಫ್ರಂಟ್‌ ಮೊದಲಾದ ದೇಶದ್ರೋಹಿ ಸಂಘಟನೆಗಳ ಪ್ರಕರಣಗಳನ್ನು ಕೂಡ ಪೊಲೀಸರು ಈಗ ಪರಿಶೀಲಿಸಬೇಕಿತ್ತು. ಮುಚ್ಚಿ ಹಾಕಿದ ಪ್ರಕರಣಗಳನ್ನು ಮತ್ತೆ ತೆಗೆದಿದ್ದರೆ ಯಾರು ತಪ್ಪಿತಸ್ಥರು ಎಂದು ಗೊತ್ತಾಗುತ್ತಿತ್ತು. ರಾಮಭಕ್ತರು ಯಾರೂ ದೇಶದ್ರೋಹಿ ಸಂಘಟನೆಗಳ ರೀತಿಯಲ್ಲಿ ಪಾಕಿಸ್ತಾನದಿಂದ ಹಣ ಪಡೆದು ಚಟುವಟಿಕೆ ನಡೆಸಿಲ್ಲ. ಸರ್ಕಾರ ದೇಶದ್ರೋಹಿಗಳ ಹಳೆ ಪ್ರಕರಣ ಪರಿಶೀಲನೆ ಮಾಡುವುದಿಲ್ಲ. ಅವರನ್ನು ಕಂಡರೆ ಕಾಂಗ್ರೆಸ್‌ ನಾಯಕರು ಭಯಕ್ಕೊಳಗಾಗುತ್ತಾರೆ. ಆದರೆ ಹಿಂದೂಗಳನ್ನು ಮಾತ್ರ ಜೈಲಿಗೆ ಹಾಕುತ್ತಾರೆ ಎಂದು ಆಕ್ರೋಶ ಹೊರಹಾಕಿದರು.

ಅಶೋಕ್ ಟ್ವೀಟ್ :ಅಲ್ಪಸಂಖ್ಯಾತರ ಮೇಲೆ ಮಮಕಾರ, ಹಿಂದೂಗಳೆಂದರೆ ತಾತ್ಸಾರ. ಅಲ್ಪಸಂಖ್ಯಾತರ ಮೇಲೆ ಎಲ್ಲಿಲ್ಲದ ಪ್ರೀತಿ, ಅಕ್ಕರೆ ತೋರುವ ಸಿಎಂ ಸಿದ್ದರಾಮಯ್ಯನವರಿಗೆ ರಾಮಭಕ್ತರ ಮೇಲೆ ಏಕಿಷ್ಟು ದ್ವೇಷ, ಹಗೆತನ?. ಕೇಸರಿ ಬಣ್ಣ, ಕುಂಕುಮ ಕಂಡರೆ ಕಾಂಗ್ರೆಸ್ ಪಕ್ಷಕ್ಕೆ ಏಕಿಷ್ಟು ಅಸಹ್ಯ?. ಹಳೇ ಕೇಸುಗಳಿಗೆ ಮರುಜೀವ ನೀಡಿ ಕರಸೇವಕರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವ ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರದ ದೌರ್ಜನ್ಯ ಅತ್ಯಂತ ಖಂಡನೀಯ ಎಂದು ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ರಾಮಜನ್ಮಭೂಮಿ ಹೋರಾಟಗಾರರ ಬಂಧನ ಖಂಡಿಸಿ ನಾಳೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ನಾನು ಪಾಲ್ಗೊಳ್ಳಲಿದ್ದೇನೆ. ಸ್ವಯಂಸೇವಕರು, ಕರಸೇವಕರು, ಹಿಂದೂ ಕಾರ್ಯಕರ್ತರ ವಿರುದ್ಧ ಎಲ್ಲೇ ದೌರ್ಜನ್ಯ ನಡೆದರೂ ಅವರ ಬೆನ್ನಿಗೆ ನಿಲ್ಲುತ್ತೇನೆ. ಕಾಂಗ್ರೆಸ್ ಸರ್ಕಾರ ನನ್ನನ್ನೂ ಬೇಕಿದ್ದರೆ ಬಂಧಿಸಲಿ, ಕೇಸು ದಾಖಲಿಸಲಿ ಎಂದು ಅಶೋಕ್ ಟ್ವೀಟ್ ಮಾಡಿದ್ದಾರೆ.

ಕರಸೇವಕರ ಬಂಧನ ಅತ್ಯಂತ ಖಂಡನೀಯ :ರಾಮಮಂದಿರ ಉದ್ಘಾಟನೆಗೆ ಸಿದ್ಧವಾಗಿರುವ ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ 30 ವರ್ಷದ ಹಳೆಯ ಪ್ರಕರಣವನ್ನು ಕೆದಕಿ ಕರಸೇವಕರ ಬಂಧನ ಮಾಡಿರುವುದು ಅತ್ಯಂತ ಖಂಡನೀಯ. ಈ ರೀತಿಯ ದ್ವೇಷದ ರಾಜಕಾರಣದಿಂದ ರಾಜ್ಯದಲ್ಲಿಯೂ ಕಾಂಗ್ರೆಸ್ ಅಂತ್ಯ ಕಾಣುವುದೂ ನಿಶ್ಚಿತ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಆಗುತ್ತಿರುವುದನ್ನು ಕಾಂಗ್ರೆಸ್​ನವರಿಗೆ ಸಹಿಸಲು ಆಗುತ್ತಿಲ್ಲ. ಇಡೀ ದೇಶದ ಜನ ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸುವುದರ ಹಿಂದಿನ ಉದ್ದೇಶ ಏನು? ಇಡೀ ದೇಶವೇ ಪ್ರಧಾನಿ ಮೋದಿಯವರಿಗೆ ಬೆಂಬಲ ಕೊಡುತ್ತಿರುವ ಸಂದರ್ಭದಲ್ಲಿ ಈ ರೀತಿ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಪಾಲನೆ ಮಾಡುವವರೇ ಕಾನೂನು ಉಲ್ಲಂಘನೆ ಮಾಡುತ್ತಿರುವುದಕ್ಕೆ ಇದು ಸ್ಪಷ್ಪ ನಿದರ್ಶನ ಎಂದು ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.

ಈಗಾಗಲೇ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ವಿರೋಧ ಮಾಡಿರುವುದಕ್ಕೆ ಕಾಂಗ್ರೆಸ್ ಗೆ ಸಂಸತ್ತಿನಲ್ಲಿ ಪ್ರತಿಪಕ್ಷದ ಸ್ಥಾನವೂ ಇಲ್ಲದಂತಾಗಿದೆ. ಈ ರೀತಿಯ ದ್ವೇಷದ ರಾಜಕಾರಣದಿಂದ ರಾಜ್ಯದಲ್ಲಿಯೂ ಕಾಂಗ್ರೆಸ್ ಅಂತ್ಯ ಕಾಣುವುದೂ ನಿಶ್ಚಿತ ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರದಿಂದ ದ್ವೇಷದ ರಾಜಕಾರಣ :ರಾಜ್ಯದ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ದ್ವೇಷ ರಾಜಕಾರಣದ ಮೂಲಕ, ಸೇಡಿನ ರಾಜಕಾರಣದ ಮೂಲಕ ಕಾಂಗ್ರೆಸ್ ಅಂತ್ಯಕಾಲ ಆರಂಭವಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾತನಾಡಿದ ಅವರು, ದೇಶದ ಕೋಟ್ಯಂತರ ಜನರ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿಜೀ ಅವರು ಈಡೇರಿಸಿದ್ದಾರೆ. ಒಂದೆಡೆ ರಾಮಮಂದಿರ ಉದ್ಘಾಟನೆಗೆ ದಿನ ನಿಗದಿಯಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ಸರ್ಕಾರವು ಸುಮಾರು 31 ವರ್ಷಗಳಷ್ಟು ಹಳೆಯ ಕೇಸುಗಳನ್ನು ತೆಗೆದು ಕರಸೇವಕರನ್ನು ಬಂಧಿಸುತ್ತಿದೆ. ಇದು ಹಿಂದೂ ವಿರೋಧಿ ಸರ್ಕಾರ ಎಂದು ಟೀಕಿಸಿದರು.

ಶ್ರೀರಾಮಚಂದ್ರನೇ ಕಾಲ್ಪನಿಕ ಎನ್ನುವ ಕಾಂಗ್ರೆಸ್ಸಿಗರು ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ದೇವಾಲಯದ ಬಗ್ಗೆ ಮಾತನಾಡುತ್ತಾರೆ. ಶ್ರೀರಾಮಚಂದ್ರನೇ ಕಾಲ್ಪನಿಕ ಎಂದಾದರೆ ಮಹರ್ಷಿ ವಾಲ್ಮೀಕಿ ಕುರಿತು ಮಾತನಾಡಲು ನಿಮಗೇನು ಹಕ್ಕಿದೆ ಎಂದು ಪ್ರಶ್ನಿಸಿದರು. ಮೋದಿ ಅವರು ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಿದ್ದಾರೆ ಎಂದು ತಿಳಿಸಿದರು.

ಸರ್ಕಾರವು ದ್ವೇಷ ರಾಜಕಾರಣ ಮಾಡುತ್ತಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ದ್ವೇಷ ರಾಜಕಾರಣದ ಮೂಲಕ, ಸೇಡಿನ ರಾಜಕಾರಣದ ಮೂಲಕ ಕಾಂಗ್ರೆಸ್ ಅಂತ್ಯಕಾಲ ಆರಂಭವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ :ಯಾರನ್ನೂ ಓಲೈಕೆ ಮಾಡುತ್ತಿಲ್ಲ, ಕಾಂಗ್ರೆಸ್​ಗೆ ಎಲ್ಲರೂ ಬೇಕು : ಸಚಿವ ವೆಂಕಟೇಶ್

ABOUT THE AUTHOR

...view details