ಮಾಜಿ ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆ ಬೆಂಗಳೂರು: "ಕೆ.ಜೆ ಹಳ್ಳಿ, ಡಿ.ಜೆ ಹಳ್ಳಿ ಪ್ರಕರಣದಲ್ಲಿ ಸಂಪುಟ ಉಪಸಮಿತಿ ರಚಿಸಿ ಪ್ರಕರಣ ಸಡಿಲಿಸಿ, ಕೇಸ್‌ನಿಂದ ಆರೋಪಿಗಳನ್ನು ಹೊರತೆಗೆದುಕೊಂಡು ಬರಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಯಾವುದೇ ಕಾರಣಕ್ಕೂ ಬಿಜೆಪಿ ಇದಕ್ಕೆ ಅವಕಾಶ ನೀಡುವುದಿಲ್ಲ. ಪಕ್ಷ ರಾಜಕೀಯವಾಗಿ ಹೋರಾಟ ನಡೆಸಲಿದೆ. ಅದೇ ರೀತಿ ಗುತ್ತಿಗೆದಾರರಿಂದ ಕಮಿಷನ್ ಕೇಳಿದ ಪ್ರಕರಣದಲ್ಲಿಯೂ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ" ಎಂದು ಮಾಜಿ ಸಚಿವ ಅಶ್ವತ್ಥ್ನಾರಾಯಣ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೆ.ಜೆ ಹಳ್ಳಿ, ಡಿ.ಜೆ ಹಳ್ಳಿ ಪ್ರಕರಣದಲ್ಲಿ ಅಮಾಯಕರ ಬಿಡುಗಡೆ ಕುರಿತು ಸಂಪುಟ ಉಪಸಮಿತಿ ರಚಿಸಲಾಗಿದೆ. ದುಷ್ಕರ್ಮಿಗಳು ಕಾನೂನು ಕೈಗೆ ತೆಗೆದುಕೊಂಡಿದ್ದರು. ಶಾಸಕರ ಮನೆ ಹಾಗು ಪೊಲೀಸ್ ಸ್ಟೇಷನ್‌ಗೆ ಬೆಂಕಿ ಇಟ್ಟಿದ್ದರು. ಘಟನೆ ನಡೆದು ಈಗಾಗಲೇ ನಾಲ್ಕು ವರ್ಷವಾಗಿದೆ. ತನಿಖೆ ನಡೆದಿದೆ. ಕೆಲವರು ಶಿಕ್ಷೆಯಲ್ಲಿ ಇದ್ದಾರೆ. ಈ ಹಂತದಲ್ಲಿ ಆರೋಪಿಗಳ ಬಿಡುಗಡೆಗೆ ಸರ್ಕಾರ ಮುಂದಾಗಿದೆ. ಈ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಳ್ಳುವುದಕ್ಕೆ ನಾವು ಬಿಡಲ್ಲ" ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲಿರುವ ಕಮಿಷನ್ ಆರೋಪ ಕುರಿತು ಪ್ರತಿಕ್ರಿಯಿಸಿ, "ರಾಜ್ಯಪಾಲರಿಗೆ ಬಿಜೆಪಿ ದೂರು ನೀಡುವ ವಿಚಾರದಲ್ಲಿ ಪಕ್ಷದ ವರಿಷ್ಠರು, ಅಧ್ಯಕ್ಷರು ದಿನಾಂಕದ ನಿರ್ಧಾರ ಮಾಡುತ್ತಾರೆ. ಗುತ್ತಿಗೆದಾರರ ವಿಚಾರದಲ್ಲಿ ನಾವೆಲ್ಲರೂ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ಡಿಸಿಎಂ ಮೇಲೆ ಭ್ರಷ್ಟಾಚಾರ ಆರೋಪವಿದೆ. ವೈಎಸ್‌ಟಿ ಜತೆಗೆ ಡಿಕೆಎಸ್ ಟ್ಯಾಕ್ಸ್ ಹೇರಲಾಗುತ್ತಿದೆ. ಭ್ರಷ್ಟಾಚಾರ ತೊಡೆಯುತ್ತೇವೆ ಎಂದು ಬಂದ ಸರ್ಕಾರದ ಮೇಲೆ ಅಪಾರ ಆರೋಪವಿದೆ. ಈ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಬೇಕು".
"ಡಿಕೆಶಿ ತಮ್ಮ ಆಸ್ತಿಯನ್ನು 1,400 ಕೋಟಿ ರೂ. ಎಂದು ಘೋಷಣೆ ಮಾಡಿದ್ದಾರೆ ಅಷ್ಟೇ. ಇನ್ನೂ ಬೇರೆ ಬೇರೆ ಹೆಸರಲ್ಲಿ ಏನೇನಿದೆ ಎಂದು ಗೊತ್ತಿಲ್ಲ. ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ, ಆ ಕಡೆಯಿಂದ ಚಿನ್ನ ಬರುತ್ತದೆ ಎನ್ನುವ ಸ್ಕಿಂನವರು ಇವರು. ಕೆಟ್ಟ ಹಿನ್ನೆಲೆಯ ವ್ಯಕ್ತಿಗಳು ವ್ಯವಸ್ಥೆಯಲ್ಲಿ ಸೇರಿಕೊಂಡರೆ ಏನಾಗಬಹುದು? ಇಂಥವರಿಗೆ ಮೌಲ್ಯ, ನಂಬಿಕೆ ಎಂದು ಪದ ಬಳಸುವುದು ದೊಡ್ಡದಾಗುತ್ತದೆ. ನೀವು ಇಷ್ಟು ಆಸ್ತಿಗೆ ಸಂತುಷ್ಟರಾಗಿದ್ದರೆ, ಅದು ಭಾಗ್ಯವೇ ಭಾಗ್ಯ. ನೀವು ಹೀರುತ್ತಲೇ ಇರುತ್ತೀರಾ. ಇದು ಎಲ್ಲಿಗೆ ನಿಲ್ಲುತ್ತದೋ ಗೊತ್ತಿಲ್ಲ. ಅತಿ ಕಡಿಮೆ ಸಮಯದಲ್ಲಿ ಈ ರೀತಿ ಹೆಸರು ಪಡೆದಿದ್ದೀರಿ" ಎಂದು ದೂರಿದರು.
"ಲೋಕಸಭಾ ಚುನಾವಣೆಗೆ ಫಂಡಿಂಗ್ ಮಾಡುವುದಕ್ಕೆ ಕರ್ನಾಟಕ ಎಟಿಎಂ ಆಗಿದೆ. ಅವರದೇ ಪಕ್ಷದ ಹಿರಿಯ ಶಾಸಕರಾದ ರಾಯರೆಡ್ಡಿ ಭ್ರಷ್ಟಾಚಾರ ಬೇಡ ಎಂದು ಹೇಳಿದ್ದಾರೆ. ಆದರೆ, ಇವರು ಕೇಳೋಕೆ ಸಿದ್ದರಿಲ್ಲ. ಅವರ ಪಕ್ಷದವರೆ ಹೇಳಿರೋದನ್ನೂ ಕೇಳೋಕೆ ಸಿದ್ದರಿಲ್ಲ. ವಿಪಕ್ಷಗಳ ಸಭೆ ಕರೆಯಬೇಕು ಎಂದು ಕೂಡ ಸಲಹೆ ನೀಡಿದ್ದಾರೆ. ಕೊಲೆ, ಸುಲಿಗೆ, ದರೋಡೆ ಈ ಸರ್ಕಾರದಲ್ಲಿ ಆಗುತ್ತಿದೆ. ಬೆಲೆ ಏರಿಕೆಯಿಂದಲೂ ಜನರು ಹತಾಶರಾಗಿದ್ದಾರೆ. ಸಮಾಜದ ಕೊನೆ ವ್ಯಕ್ತಿ ಕೂಡ ಇವರ ಬಗ್ಗೆ ಹತಾಶರಾಗಿದ್ದಾರೆ" ಎಂದರು.
ಪಕ್ಷದಲ್ಲಿ ಕಾರ್ಯಧ್ಯಕ್ಷರ ಹುದ್ದೆ ಸೃಷ್ಟಿಸುವಂತೆ ವಿ. ಸೋಮಣ್ಣ ಸಲಹೆ ವಿಚಾರದ ಕುರಿತು ಮಾತನಾಡಿ, "ಪಕ್ಷದಲ್ಲಿ ಯಾರು ಬೇಕಾದರೂ ಸಲಹೆ ಕೊಡಬಹುದು. ಸಲಹೆ ಕೊಡುವುದರಲ್ಲಿ ತಪ್ಪೇನಿಲ್ಲ. ಅವರ ಅಭಿಪ್ರಾಯ ಅವರು ವ್ಯಕ್ತಪಡಿಸಿದ್ದಾರೆ. ಪಕ್ಷ ಆ ಬಗ್ಗೆ ನಿರ್ಧಾರ ಮಾಡಲಿದೆ" ಎಂದು ಹೇಳಿದರು.
ಇದನ್ನೂ ಓದಿ:ರಾಜ್ಯದಲ್ಲಿ ಮುಂಗಾರು ಕೊರತೆ: ಬರ ಘೋಷಣೆಗಾಗಿ ಕಠಿಣ ಮಾನದಂಡ ಸಡಿಲಿಸಲು ಕೋರಿ ಕೇಂದ್ರಕ್ಕೆ ಸಿಎಂ ಪತ್ರ