ಕರ್ನಾಟಕ

karnataka

ETV Bharat / state

ವಾರಾಂತ್ಯಕ್ಕೆ ಬಿಜೆಪಿ ನಾಯಕರ ಸಭೆ: ಮಸ್ಕಿ, ಬಸವಕಲ್ಯಾಣ ಚುನಾವಣಾ ಸಿದ್ಧತೆ ಕುರಿತು‌ ಚರ್ಚೆ - ಮಸ್ಕಿ ಉಪಚುನಾವಣೆ ಸುದ್ದಿ

ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಿಗೆ ಉಪಚುನಾವಣಾ ದಿನಾಂಕ ಘೋಷಣೆ ಕೆಲವೇ ದಿನಗಳಲ್ಲಿ ಆಗಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸಿಎಂ ಸಮ್ಮುಖದಲ್ಲಿ ಸಭೆ ನಡೆಸಲಿದ್ದಾರೆ.

ಬಿಜೆಪಿ ನಾಯಕರ ಸಭೆ
ಬಿಜೆಪಿ ನಾಯಕರ ಸಭೆ

By

Published : Nov 20, 2020, 7:14 PM IST

ಬೆಂಗಳೂರು:ಯಾವ ಕ್ಷಣದಲ್ಲಿ ಬೇಕಾದರೂ ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಿಗೆ ಉಪಚುನಾವಣಾ ದಿನಾಂಕ ಘೋಷಣೆಯಾಗಲಿದ್ದು, ಚುನಾವಣಾ ಸಿದ್ಧತೆಗಳ ಕುರಿತು ವಾರಂತ್ಯಕ್ಕೆ ಬಿಜೆಪಿ ನಾಯಕರು ಸಭೆ ನಡೆಸಲಿದ್ದಾರೆ.

ಈಗಾಗಲೇ ಮಸ್ಕಿಗೆ ಪ್ರತಾಪ್ ಗೌಡ ಪಾಟೀಲ್ ಹೆಸರನ್ನು ಬಿಜೆಪಿ ಕೋರ್ ಕಮಿಟಿ ಸಭೆ ಹೈಕಮಾಂಡ್​ಗೆ ಶಿಫಾರಸು ಮಾಡಲು ನಿರ್ಧರಿಸಿದ್ದು, ಬಸವಕಲ್ಯಾಣಕ್ಕೆ ಅಭ್ಯರ್ಥಿ ಆಯ್ಕೆ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ. ಚುನಾವಣಾ ಉಸ್ತುವಾರಿಗಳ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಬಸವಕಲ್ಯಾಣಕ್ಕೆ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಉಸ್ತುವಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದರೆ, ಮಸ್ಕಿ ಸಂಭಾವ್ಯ ಅಭ್ಯರ್ಥಿ ಪ್ರತಾಪ್ ಗೌಡ ಕೂಡ ವಿಜಯೇಂದ್ರ ಅವರನ್ನೇ ನಮ್ಮ ಕ್ಷೇತ್ರಕ್ಕೂ ಚುನಾವಣಾ ಉಸ್ತುವಾರಿ ಮಾಡಿ ಎಂದು ಬೇಡಿಕೆ ಇರಿಸಿದ್ದಾರೆ. ಈ ಸಂಬಂಧ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ವಿಜಯೇಂದ್ರ ನೇತೃತ್ವದಲ್ಲಿ ಚುನಾವಣಾ ಪ್ರಚಾರ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ಹೀಗಾಗಿ ಯಾರು ಯಾವ ಕ್ಷೇತ್ರದಲ್ಲಿ ಪ್ರಚಾರ ನಡೆಸಬೇಕು, ಯಾರಿಗೆ ಯಾವ ಕ್ಷೇತ್ರದ ಉಸ್ತುವಾರಿ ನೀಡಬೇಕು ಎನ್ನುವ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ. ಚುನಾವಣಾ ಜವಾಬ್ದಾರಿ ಕುರಿತು ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎನ್ನಲಾಗಿದೆ.

ಶಿರಾ, ಆರ್.ಆರ್.ನಗರ ಕ್ಷೇತ್ರಗಳ ಗೆಲುವಿನ ಉತ್ಸಾಹದಲ್ಲಿರುವ ಬಿಜೆಪಿ, ಮಸ್ಕಿ, ಬಸವಕಲ್ಯಾಣ ಎರಡೂ ಕ್ಷೇತ್ರದ ಉಪಚುನಾವಣೆ ಗೆಲ್ಲುವ ಉಮೇದಿನಲ್ಲಿದೆ. ಹೀಗಾಗಿ ಗೆಲುವಿನ ಕಾರ್ಯತಂತ್ರದ ಕುರಿತು ಸಭೆಯಲ್ಲಿ ಬಿಜೆಪಿ ನಾಯಕರು ಮಹತ್ವದ ಚರ್ಚೆ ನಡೆಸಲಿದ್ದಾರೆ.

ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​​ ಎರಡೂ ಕ್ಷೇತ್ರ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರಗಳ ಪ್ರವಾಸ ಆರಂಭಿಸಿದ್ದಾರೆ. ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಅಧಿಕ ಕ್ಷೇತ್ರಗಳನ್ನು ಗೆದ್ದು ಅಧಿಕಾರ ಹಿಡಿಯಲಿದೆ. ಭೂತಕಾಲದ ಬಗ್ಗೆ ನಾವು ಯೋಚಿಸುವುದಿಲ್ಲ. ಭವಿಷ್ಯದಲ್ಲಿ ಬಿಜೆಪಿ ಗೆಲ್ಲುವಂತೆ ನೋಡಿಕೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ ಬೈ ಎಲೆಕ್ಷನ್​ನಲ್ಲಿ ನಾವೇ ವಿನ್ ಆಗೋದಾಗಿ ಹೇಳಿದ್ದಾರೆ.

ABOUT THE AUTHOR

...view details