ಬೆಂಗಳೂರು: ಈ ಬಾರಿಯ ವಿಧಾಸಭೆ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇರುವುದು ಸಾಬೀತಾಗಿದೆ. ಮತ್ತೊಮ್ಮೆ ತಮ್ಮದೇ ಸರ್ಕಾರ ಬರುತ್ತೆ ಅನ್ನುವ ಲೆಕ್ಕಾಚಾರದಲ್ಲಿದ್ದ ಬಿಜೆಪಿಗೆ ಮರ್ಮಾಘಾತವಾಗಿದೆ. ಹೌದು, ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಬೇಕು ಎನ್ನುವ ಬಿಜೆಪಿ ನಾಯಕರ ಕನಸು ನುಚ್ಚು ನೂರಾಗಿದೆ. ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಹಳೆ ಮೈಸೂರು ಭಾಗದ ಜನರು ಕೈಕೊಟ್ಟಿದ್ದು ಒಂದು ಕಡೆಯಾದರೆ ಮಧ್ಯ ಕರ್ನಾಟಕದಲ್ಲೂ ಭಾರತೀಯ ಜನತಾ ಪಕ್ಷಕ್ಕೆ ಹೀನಾಯ ಸೋಲು ಕಂಡಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮಕಾಡೆ ಮಲಗಿದ್ದು, 9 ಜಿಲ್ಲೆಗಳಲ್ಲಿ ಖಾತೆಯನ್ನೇ ತೆರೆದಿಲ್ಲ. 9 ಜಿಲ್ಲೆಗಳ ಶೂನ್ಯ ಸಾಧನೆ ಒಂದು ಕಡೆಯಾದರೆ 8 ಜಿಲ್ಲೆಗಳಲ್ಲಿ ಕೇವಲ ಒಂದೊಂದೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನು 7 ಜಿಲ್ಲೆಗಳಲ್ಲಿ ಕೇವಲ ತಲಾ ಎರಡು ಸ್ಥಾನ ಮಾತ್ರ ಗೆದ್ದಿದ್ದು, ಒಟ್ಟಾರೆಯಾಗಿ ಈ ಮೂರು ಭಾಗದಿಂದ 24 ಜಿಲ್ಲೆಗಳಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿ ಹೀನಾಯ ಸೋಲು ಕಂಡಿದೆ.
ಇರುವುದರಲ್ಲಿ ಬೆಂಗಳೂರು ನಗರ, ಬೆಳಗಾವಿ, ಬೀದರ್, ಉಡುಪಿ, ಶಿವಮೊಗ್ಗ ಮಾತ್ರ ಬಿಜೆಪಿ ಕೈ ಹಿಡಿದಿವೆ. ಬೆಂಗಳೂರು ನಗರ 15, ಬೆಳಗಾವಿ 7, ದಕ್ಷಿಣ ಕನ್ನಡ 6, ಉಡುಪಿ 5, ಬೀದರ್ 4, ಶಿವಮೊಗ್ಗ 3, ಧಾರವಾಡ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಮಾತ್ರ ಕಮಲ ಅರಳಿದೆ. ಬಿಜೆಪಿಯ ಭದ್ರಕೋಟೆಗಳಾದ ಚಿಕ್ಕಮಗಳೂರು, ಬಳ್ಳಾರಿ, ಕೊಡಗಿನಲ್ಲಿ ಶೂನ್ಯ ಸಂಪಾದನೆಯಾಗಿದ್ದು ಈ ಬಾರಿ ಖಾತೆಯನ್ನೇ ತೆರೆದಿಲ್ಲ. ಇನ್ನು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರದಲ್ಲಿ ಗಳಿಕೆ ಶೂನ್ಯವಾಗಿದೆ.