ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಒಬ್ಬರ ಹಿಂದೆ ಒಬ್ಬರಂತೆ ಪಠ್ಯಕ್ಕೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯುತ್ತಿದ್ದಾರೆ. ಈ ಪಠ್ಯ ವಾಪಸ್ ಸಮರದ ವಿರುದ್ಧ ಬಿಜೆಪಿಯ ಮುಖಂಡರು ಕಿಡಿಕಾರಿದ್ದು, ಇದು ಕಾಂಗ್ರೆಸ್ ಕೃಪಾಪೋಷಿತ ಟೂಲ್ ಕಿಟ್ ರಾಜೀನಾಮೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಹಾಗೂ ಬಲಪಂಥೀಯರಿಂದ ಟೂಲ್ ಕಿಟ್ ರಾಜೀನಾಮೆ ಎಂದು ವ್ಯಾಖ್ಯಾನ ಮಾಡಿದ್ದು, ಇಂತಹ ಸಾಹಿತಿಗಳ ರಾಜೀನಾಮೆಯಿಂದ ರಾಜ್ಯ ಸರ್ಕಾರಕ್ಕೆ ಮರುಕವಿಲ್ಲ ಅಂತ ಟ್ವೀಟ್ ಮೂಲಕ ಸಚಿವ ಅಶ್ವತ್ಥ್ ನಾರಾಯಣ್ ಕಿಡಿಕಾರಿದ್ದಾರೆ. ಸುಳ್ಳಿನ ಕಥೆ ಹೆಣೆಯುವಲ್ಲಿ ಪಳಗಿರುವ ಕಾಂಗ್ರೆಸ್ ಕೃಪಾಪೋಷಿತ ಸಾಹಿತಿಗಳ ಬಳಗವಿಂದು ತಮ್ಮ ಬೇಳೆ ಬೇಯಿಸಿಕೊಳ್ಳಲಾಗದೇ ಕಂಪಿಸುತ್ತಿದೆ. #ToolkitResignation ತಂತ್ರ ಬಳಸಿ ಸಿಂಪತಿ ಗಿಟ್ಟಿಸಿಕೊಳ್ಳಬಯಸುವ ಇಂಥವರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಯಾವುದೇ ಮರುಕವಿಲ್ಲ. ಇವರಿಗೆ ನೂತನ ಪಠ್ಯಕ್ರಮ ಪಥ್ಯವಾಗದ ಮಾತ್ರಕ್ಕೆ ಬದಲಾಯಿಸಲಾಗದು ಎಂದು ಕಿಡಿಕಾರಿದ್ದಾರೆ.
ಸಚಿವ ನಿರಾಣಿ ಕೂಡ ಸಾಹಿತಿಗಳು, ಕಾಂಗ್ರೆಸ್ ನಾಯಕರ ವಿರುದ್ಧ ಗರಂ ಆಗಿದ್ದು, ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಕಾಮಾಲೆ ಕಣ್ಣಿನವರಿಗೆ ಜಗತ್ತೆಲ್ಲ ಹಳದಿ. ತುಷ್ಟೀಕರಣ, ತುಚ್ಛೀಕರಣಗಳಲ್ಲೇ ಮುಳುಗಿರುವವರ ಯೋಗ್ಯತೆಯೂ ಇಷ್ಟೇ. ಕರ್ನಾಟಕ ಬಿಜೆಪಿಗೆ ಇಂತಹ ಮುಲಾಜುಗಳಿಲ್ಲ. ಸತ್ಯವನ್ನು ಎತ್ತಿ ಹಿಡಿಯುವುದು ಮತ್ತು ಅದನ್ನು ಮಕ್ಕಳಿಗೆ ಕಲಿಸುವುದು ನಮ್ಮ ಸಂಕಲ್ಪ. #ToolkitResignation ಕೆಲಸವನ್ನು ಕಾಂಗ್ರೆಸ್ ಮುಂದುವರಿಸಲಿ ಎಂದಿದ್ದಾರೆ.
ಪಠ್ಯವಿರೋಧಿ ತಂತ್ರದ ಎಲ್ಲಾ ಸಾಧನಗಳೂ ಮುಗಿದು ದಿಕ್ಕೆಟ್ಟಿರುವ ಕಾಂಗ್ರೆಸ್ ಕೊನೆಯ ದಾಳವಾಗಿ ತಾನು ಪೋಷಿಸಿಕೊಂಡು ಬಂದಿರುವ ಸಾಹಿತಿಗಳನ್ನು ಈಗ ಛೂ ಬಿಟ್ಟಿದೆ. ಒಬ್ಬರ ಹಿಂದೆ ಒಬ್ಬರಂತೆ ಸಾಹಿತಿಗಳು ಕಾಂಗ್ರೆಸ್ ನೀಡಿದ್ದ ಪದವಿ ಭಿಕ್ಷೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ಸರ್ಕಾರ ಇದನ್ನು ಅಂಗೀಕರಿಸಬೇಕು! #AcceptToolkitResignation ಎಂದು ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.
AcceptToolkitResignation ಅಭಿಯಾನ ಶುರು: ಬಿಜೆಪಿ ಹಾಗೂ ಬಲಪಂಥೀಯರಿಂದ ಟೂಲ್ ಕಿಟ್ ರಾಜೀನಾಮೆ ಎಂದು ವ್ಯಾಖ್ಯಾನ ಬೆನ್ನಲ್ಲೇ, ರಾಜೀನಾಮೆಯನ್ನು ಅಂಗೀಕರಿಸಿ ಎಂದು ಅಭಿಯಾನ ಶುರುವಾಗಿದೆ. #AcceptToolkitResignation ಎಂದು ಅಭಿಯಾನ ಶುರುವಾಗಿದ್ದು, ಇದು ಟೂಲ್ ಕಿಟ್ ರಾಜೀನಾಮೆ ಎಂದು ಬಿಜೆಪಿ ಮುಖಂಡರು ಟೀಕಿಸಿದ್ದಾರೆ. ಸಿಎಂ ಹಾಗೂ ಶಿಕ್ಷಣ ಸಚಿವರ ಬೆನ್ನಿಗೆ ನಿಂತಿರುವ ಸಚಿವ ಸುಧಾಕರ್, ಸಚಿವ ಮುರುಗೇಶ್ ನಿರಾಣಿ, ಸಚಿವ ಅಶ್ವತ್ಥ್ ನಾರಾಯಣ್ ಪಠ್ಯ ಪರಿಷ್ಕರಣೆ ಸಂಬಂಧ ಸಮರ್ಥನೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಕೊಡಗು: ಹೈಡೋಸೇಜ್ ಇಂಜೆಕ್ಷನ್ನಿಂದ ಕಾಡಾನೆ ಸಾವು..?
ಬೊಮ್ಮಾಯಿ ಸರ್ ನನ್ನದೊಂದು ಮನವಿ, ಕುವೆಂಪು ಪ್ರತಿಷ್ಠಾನಕ್ಕೆ ಯಾರೇ ರಾಜೀನಾಮೆ ನೀಡಿದರೂ ಅದನ್ನು ಅಂಗೀಕರಿಸಿ. ಆ ಸ್ಥಾನಕ್ಕೆ ಸೂಕ್ತ ಮತ್ತು ರಾಷ್ಟ್ರೀಯ ವಿಚಾರವುಳ್ಳ ವ್ಯಕ್ತಿಗಳನ್ನು ಆಯ್ಕೆ ಮಾಡಿ. ರಾಜೀನಾಮೆ ನಾಟಕಕ್ಕೆ ಬಗ್ಗದೇ ರೋಹಿತ್ ಹಾಗೂ ಸಚಿವ ಬಿ.ಸಿ ನಾಗೇಶ್ ಅವರ ಬೆನ್ನಿಗೆ ನಿಲ್ಲಿ. ಯಾವುದೇ ಕಾರಣಕ್ಕೂ ಎಡವಟ್ಟು ಪಂಥೀಯರಿಗೆ ಮಣಿಯಬೇಡಿ. ಏನೂ ಕೆಲಸ ಮಾಡದೇ, ಸಮಾಜಕ್ಕೆ ಯಾವುದೇ ಕೊಡುಗೆ ಕೊಡದೇ, ಕೇವಲ ಜಾತಿಯ ಆಧಾರದಲ್ಲಿ ಮತ್ತು ಕಾಂಗ್ರೆಸ್ನ ಕೆಲವು ಮನೆತನಗಳ ಜೀತ ಮಾಡಿದ ಕಾರಣಕ್ಕೆ ಕೆಲವು ಪ್ರಾಧಿಕಾರ, ಪ್ರತಿಷ್ಠಾನಗಳ ಅಧ್ಯಕ್ಷ, ಸದಸ್ಯಗಿರಿಯ ಲಾಭ ಅಥವಾ ಭಿಕ್ಷೆ ಪಡೆದ ಸಾಹಿತ್ಯ ರಾಜಕಾರಣಿಗಳ ರಾಜೀನಾಮೆ ಇದು. ಮೀನಾಮೇಷ ಎಣಿಸಬೇಡಿ, ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ, ಸತ್ಯ ಅರಿಯಲಿ. ನಮ್ಮ ಜನರೇಷನ್ ತರ ಸುಳ್ಳಿನ ಕಂತೆ ಓದೋದು ತಪ್ಪಲಿ ಎಂದು ಹಲವರು ಟ್ವೀಟ್ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ.