ಬೆಂಗಳೂರು:ನಿಮ್ಮ ದಲಿತ ಪರ ಕಾಳಜಿಯ ಪೊರೆ ಕಳಚುತ್ತಿದೆ. ದಲಿತ ನಾಯಕ ಪರಮೇಶ್ವರ್ ಅವರನ್ನು ಕುತಂತ್ರದಿಂದ ಸೋಲಿಸಿದಿರಿ. ದಲಿತ ಶಾಸಕ ಅಖಂಡ ಮನೆ ಮೇಲೆ ದಾಳಿಯಾದಾಗ, ದಾಳಿ ಮಾಡಿದ ಮತಾಂಧರ ಪರವಾಗಿ ನಿಂತಿರಿ. ಈಗ ದಲಿತ ನಾಯಕಿ ಮೋಟಮ್ಮ ಅವರ ಆತ್ಮಕಥನದಲ್ಲಿ ಖಳನಾಯಕನಾಗಿದ್ದೀರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ಟೀಕಿಸಿದೆ.
ದಲಿತ ವಿರೋಧಿ ಸಿದ್ದರಾಮಯ್ಯ ಹ್ಯಾಷ್ ಟ್ಯಾಗ್ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಮರು ಹುಟ್ಟು ನೀಡಿದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಗೆಲ್ಲುವಲ್ಲಿ ಮೋಟಮ್ಮ ಅವರ ಶ್ರಮ ಮಹತ್ವದ್ದು. ಅಂತಹ ಮೋಟಮ್ಮ ಅವರನ್ನು ಕಾಂಗ್ರೆಸ್ ಹೀನಾಯವಾಗಿ ನಡೆಸಿಕೊಂಡಿದೆ. ಇದು ದಲಿತ ಹಾಗೂ ಮಹಿಳಾ ಸಮುದಾಯಕ್ಕೆ ನೀವು ಮಾಡಿದ ಅವಮಾನ. ದಲಿತ ವರ್ಗದಿಂದ ಬಂದ ಮಹಿಳಾ ನಾಯಕಿ ಮೋಟಮ್ಮ ಅವರ ಬೆಳವಣಿಗೆ ಸಹಿಸದೆ, ಅವರನ್ನು ಮಂತ್ರಿ ಮಂಡಲದಲ್ಲಿ ತೆಗೆದುಕೊಳ್ಳದೆ, ಅವರನ್ನು ಸಿದ್ದರಾಮಯ್ಯ ಮೂಲೆಗುಂಪು ಮಾಡಿದ್ದರು. ದಲಿತರಿಗೆ ಅನ್ಯಾಯ ಮಾಡುವಾಗ ಸಿದ್ದರಾಮಯ್ಯ ಅವರ ಅಹಿಂದ ಮಂತ್ರ ಎಲ್ಲಿತ್ತು? ಎಂದು ಪ್ರಶ್ನಿಸಿದೆ.
ರಾಜಕೀಯವಾಗಿ ಮೋಟಮ್ಮ ಮೂಲೆಗುಂಪು: ಸಿದ್ದರಾಮಯ್ಯರಿಂದಾಗಿ ಕಾಂಗ್ರೆಸ್ ಹೇಗೆ ದಲಿತ ವಿರೋಧಿಯಾಗಿ ಬೆಳೆದಿದೆ ಎಂದು ಮಾಜಿ ಸಚಿವೆ ಮೋಟಮ್ಮ ಅವರು ತಮ್ಮ ಆತ್ಮಕಥೆಯಲ್ಲಿ ಕಂಬನಿ ಮಿಡಿದಿದ್ದಾರೆ. ಸಿದ್ದರಾಮಯ್ಯ ಅವರೇ, ಅಹಿಂದ ರಾಜಕಾರಣದಲ್ಲಿ ಈಗ ದಲಿತರನ್ನು ಹೊರಗಿಟ್ಟಿದ್ದೀರಾ? ಇಂದಿರಾಗಾಂಧಿ ಕಾಲದಿಂದಲೂ ಕಾಂಗ್ರೆಸ್ ಕಟ್ಟಾಳುವಾಗಿದ್ದ ಮೋಟಮ್ಮ ಅವರನ್ನು ಸಿದ್ದರಾಮಯ್ಯ ರಾಜಕೀಯವಾಗಿ ಮೂಲೆಗುಂಪು ಮಾಡಿದರು. ಮೋಟಮ್ಮ ಅವರನ್ನು ಸಚಿವರನ್ನಾಗಿ ಮಾಡುವ ಸಂದರ್ಭ ಬಂದಾಗ ವಿಧಾನಪರಿಷತ್ ಸದಸ್ಯರು ಎಂದು ಕಡೆಗಣಿಸಲಾಗಿತ್ತು. ಸಿದ್ದರಾಮಯ್ಯ ಈಗ ದಲಿತ ವಿರೋಧಿ ಸಿದ್ದರಾಮಯ್ಯ ಆಗಿ ಬದಲಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.