ಬೆಂಗಳೂರು: ಆತ್ಮಸಾಕ್ಷಿ ಶಬ್ದ ಪ್ರಯೋಗ ಮಾಡುವುದಕ್ಕೆ ನಿಮಗೆ ನೈತಿಕತೆ ಇದೆಯೇ? ಆತ್ಮವಂಚಕತನಕ್ಕೆ ನಿಮಗಿಂತ ಬೇರೆ ಉದಾಹರಣೆ ಇಲ್ಲ. ಹೀಗಿರುವಾಗ ಇಂತಹ ಪದ ಬಳಕೆ ನಿಮಗೆ ಶೋಭೆಯಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 24ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆ ನಡೆದು ಹೋಯಿತು. ಆಗ ನಿಮ್ಮ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ಪ್ರಶ್ನಿಸಿದೆ.
ಸಿದ್ದುಆತ್ಮಸಾಕ್ಷಿ ಹ್ಯಾಷ್ ಟ್ಯಾಗ್ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, 2013ರಿಂದ 2017ರ ಅವಧಿಯಲ್ಲಿ ಕರ್ನಾಟಕದಲ್ಲಿ 3 ಸಾವಿರಕ್ಕೂ ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿತ್ತು. ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಸಿದ್ದರಾಮಯ್ಯ ಅವರ ಆತ್ಮಸಾಕ್ಷಿ ಎಲ್ಲಿತ್ತು? ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಆದಾಗ, ಅಂದಿನ ಗೃಹ ಸಚಿವ ಜಾರ್ಜ್ ಹಿಂದೆ ನಿಂತಾಗ ನಿಮ್ಮ ಆತ್ಮಸಾಕ್ಷಿ ಎಲ್ಲಿತ್ತು? ಎಂದು ಕುಟುಕಿದೆ.
ಪರಮೇಶ್ವರ್ಗೆ ವಂಚನೆ:ನಾನು ರೈತ ಪರ. ನಾನು ನಂಜುಂಡಸ್ವಾಮಿ ಅವರ ಶಿಷ್ಯ ಎಂದು ಭಾಷಣ ಬಿಗಿಯುವ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ರೈತರು ಕುಡಿದು ಸತ್ತರು ಎಂದು ಹೇಳಿಕೆ ನೀಡಿ ರೈತರಿಗೆ ಅವಮಾನ ಮಾಡಿದ್ದರು. ಸಿದ್ದರಾಮಯ್ಯನವರೇ, ಇದೇನಾ ನಿಮ್ಮ ಆತ್ಮಸಾಕ್ಷಿ? ಕೆಪಿಸಿಸಿಯ ಅಂದಿನ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರನ್ನು ಸೋದರನಂತೆ ನೋಡಿಕೊಂಡರು. ಆದರೆ ಸಿದ್ದರಾಮಯ್ಯ ಅವರು ದಲಿತ ನಾಯಕನನ್ನೇ ವಂಚನೆಯಿಂದ ಸೋಲಿಸಿದರು. ದಲಿತ ನಾಯಕನ ಬೆನ್ನಿಗೆ ಚೂರಿ ಹಾಕಿದ್ದು ಆತ್ಮಸಾಕ್ಷಿಯೇ? ಎಂದು ಬಿಜೆಪಿ ಟೀಕಿಸಿದೆ.
ಶಾದಿಭಾಗ್ಯ ಯೋಜನೆ:70 ಲಕ್ಷದ ಹುಬ್ಲೋಟ್ ಕೈಗಡಿಯಾರವನ್ನು ಗಿಫ್ಟ್ ಹೆಸರಿನಲ್ಲಿ ತೆಗೆದುಕೊಂಡು ಕೈಗೆ ಕಟ್ಟಿಕೊಳ್ಳುವಾಗ ಸಿದ್ದರಾಮಯ್ಯ ಆತ್ಮಸಾಕ್ಷಿ ಎಲ್ಲಿತ್ತು? ತಾನು ಸಾಮಾಜಿಕ ನ್ಯಾಯದ ಪರ ಎಂದು ಘೋಷಿಸಿಕೊಂಡು ವಿದ್ಯಾರ್ಥಿಗಳ ಪ್ರವಾಸ ಯೋಜನೆಯಲ್ಲೂ ಜಾತಿ ಹುಡುಕಿದರು. ಶಾದಿಭಾಗ್ಯ ಯೋಜನೆ ತಂದು ಹೆಣ್ಣು ಮಕ್ಕಳಲ್ಲೂ ಧರ್ಮ ಹುಡುಕಿದರು. ಸಿದ್ದರಾಮಯ್ಯನವರೇ, ಇದೇನಾ ನಿಮ್ಮ ಆತ್ಮಸಾಕ್ಷಿ? ನಾನು ಪ್ರಾಮಾಣಿಕ, ಪ್ರಾಮಾಣಿಕ ಎಂದು ಸುಳ್ಳು ಹೇಳುತ್ತಲೇ ಅರ್ಕಾವತಿ ರೀಡು ಪ್ರಕರಣದಲ್ಲಿ ಸಾವಿರಾರು ಕೋಟಿ ಕೈ ಬದಲಾಗುವಂತೆ ನೋಡಿಕೊಂಡಿರಿ. ಆಹಾ ಎಂತಹ ಆತ್ಮಸಾಕ್ಷಿ ನಿಮ್ಮದು ಸಿದ್ದರಾಮಯ್ಯ!!! ಎಂದು ಬಿಜೆಪಿ ವ್ಯಂಗ್ಯವಾಡಿದೆ.