ಬೆಂಗಳೂರು: ನಿಮ್ಮದೇ ಕಾಂಗ್ರೆಸ್ ಸರ್ಕಾರವಿದ್ದಾಗ ಪೊಲೀಸರೇ ದಂಗೆ ಎದ್ದಿದ್ದನ್ನು ಮರೆಯದಿರಿ ಎಂದು ಸಾರಿಗೆ ಮುಷ್ಕರವನ್ನು ಪೊಲೀಸ್ ಬಲದಿಂದ ದಮನಿಸಲು ಹೊರಟಿದೆ ಎನ್ನುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಬಿಜೆಪಿ ಟಾಂಗ್ ನೀಡಿದೆ.
ಸಿದ್ದರಾಮಯ್ಯ ಅವರೇ, ನಿಮ್ಮದೇ ಕಾಂಗ್ರೆಸ್ ಸರ್ಕಾರ ಇದ್ದಾಗ ಪೊಲೀಸರೇ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದರು. ರಾಜ್ಯದ ಇತಿಹಾಸದಲ್ಲೇ ಅದೊಂದು ಕಪ್ಪು ಚುಕ್ಕೆ. ಕೆಳ ಹಂತದ ಪೊಲೀಸ್ ಸಿಬ್ಬಂದಿಯನ್ನು ನೀವು ದಮನಿಸಿದ್ದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ಈಗ ಮೊಸಳೆ ಕಣ್ಣೀರು ಸುರಿಸಿ ನಾಯಕ ಎನಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಟ್ವೀಟ್ ಮೂಲಕ ಬಿಜೆಪಿಯು ಸಿದ್ದರಾಮಯ್ಯರ ಕಾಲೆಳೆದಿದೆ.
ವಿಫಲ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ, ನೀವು ಮುಖ್ಯಮಂತ್ರಿಯಾಗಿದ್ದಾಗ ರೈತರ ಆತ್ಮಹತ್ಯಾ ಪ್ರಕರಣದ ಮೆರವಣಿಗೆಯೇ ನಡೆದಿತ್ತು. ಬೆಳಗಾವಿಯಲ್ಲಿ ವಿಠಲ್ ಅರಭಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಾಗ, ಕುಡಿದು ಸತ್ತ ಎಂದು ವ್ಯಂಗ್ಯವಾಡಿದ್ದೀರಿ. ನವಲಗುಂದದಲ್ಲಿ ರೈತರ ಮೇಲೆ ಮಾರಣಾಂತಿಕ ಲಾಠಿ ಚಾರ್ಜ್ ಮಾಡಿದ್ದು ಮರೆತು ಹೋಯಿತೇ? ಎಂದು ಬಿಜೆಪಿ ಪ್ರಶ್ನಿಸಿದೆ.