ಬೆಂಗಳೂರು:ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ವಾರ್ ಮುಂದುವರೆಸಿದ್ದು, ರಾಹುಲ್ ಗಾಂಧಿ ಹೇಳಿದ್ದೊಂದು ಡಿ. ಕೆ.ಶಿವಕುಮಾರ್ ಮಾಡುತ್ತಿರುವುದೊಂದು ಎನ್ನುವಂತಾಗಿದೆ. ಸತ್ಯ ಹೇಳಿದವರಿಗೆ ಗೇಟ್ ಪಾಸ್ ನೀಡಿ ಉಚ್ಚಾಟನೆಗೊಂಡವರಿಗೆ ಅವಕಾಶ ನೀಡಲಾಗಿದೆ ಎಂದು ಕಾಂಗ್ರೆಸ್ ಪದಾಧಿಕಾರಿಗಳ ನೇಮಕದ ವಿಷಯ ಪ್ರಸ್ತಾಪಿಸಿ ಬಿಜೆಪಿ ಲೇವಡಿ ಮಾಡಿದೆ.
ಭಾರತದ ಅತ್ಯಂತ ಹಿರಿಯ ಯುವನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ 150 ಸ್ಥಾನ ಗೆಲ್ಲುವುದೇ ನಮ್ಮ ಗುರಿ ಎಂದಿದ್ದರು. ಆದರೆ, ಇದನ್ನು ಅಪಾರ್ಥ ಮಾಡಿಕೊಂಡ ಡಿ. ಕೆ ಶಿವಕುಮಾರ್ ಅವರು 150+ ಪದಾಧಿಕಾರಿಗಳನ್ನು ನೇಮಿಸಿದ್ದಾರೆ. ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವುದು ಅಸಾಧ್ಯ ಎಂದುಕೊಂಡು 150+ ಪದಾಧಿಕಾರಿಗಳಿಗೆ ಅವಕಾಶ ನೀಡಿದ್ದೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಬಗ್ಗೆ ಪಕ್ಷದ ಕಚೇರಿಯಲ್ಲೇ ಕುಳಿತು ಭ್ರಷ್ಟಾಚಾರದ ಆರೋಪ ಮಾಡಿದ ಉಗ್ರಪ್ಪನವರಿಗೆ ಉಪಾಧ್ಯಕ್ಷ ಸ್ಥಾನ!. ಪಕ್ಷದಿಂದ ಉಚ್ಚಾಟನೆಗೊಂಡ ನಲಪಾಡ್ ಯುವ ಕ್ರಾಂಗ್ರೆಸ್ ಅಧ್ಯಕ್ಷ!. ಕಾಂಗ್ರೆಸ್ ಪಕ್ಷದಲ್ಲಿ ಜವಾಬ್ದಾರಿ ಪಡೆಯಲು ಇದೇ ಮಾನದಂಡವೋ? ಎಂದು ಬಿಜೆಪಿ ಪ್ರಶ್ನಿಸಿದೆ.ಕಾಂಗ್ರೆಸ್ ಪಕ್ಷದಲ್ಲಿ ಸತ್ಯಕ್ಕೆ ಬೆಲೆ ಇಲ್ಲ!. ಕೆಪಿಸಿಸಿಯ ಭ್ರಷ್ಟಾಧ್ಯಕ್ಷರ ಪರ್ಸೆಂಟೇಜ್ ರಾಜಕೀಯ ಬಯಲು ಮಾಡಿದ ಸಲೀಂ ಅಹ್ಮದ್‌ಗೆ ಗೇಟ್ ಪಾಸ್. ಭ್ರಷ್ಟಾಧ್ಯಕ್ಷರ ಪರ್ಸೆಂಟೇಜ್ ರಾಜಕೀಯಕ್ಕೆ ಹೂಂ ಗುಟ್ಟಿದ ಉಗ್ರಪ್ಪಗೆ ಉಪಾಧ್ಯಕ್ಷ ಪಟ್ಟ. ಸಿದ್ದರಾಮಯ್ಯ ಅವರೆದುರು ಡಿಕೆಶಿ ಇಷ್ಟೊಂದು ತತ್ತರಿಸಿದ್ದೇಕೆ? ಎಂದು ಟೀಕಿಸಿದೆ.
ಓದಿ:ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ ಕನ್ನಡ ಕಡ್ಡಾಯ ತೀರ್ಪು ಪಡೆಯುತ್ತೇವೆ : ಸಚಿವ ಅಶ್ವತ್ಥ್ ನಾರಾಯಣ