ಬೆಂಗಳೂರು:ಸುಳ್ಳು ಹಾಗೂ ಕಪಟಕ್ಕೆ ಮತ್ತೊಂದು ಹೆಸರೇ ಎಂ.ಬಿ ಪಾಟೀಲ್. ಧರ್ಮ ವಿಭಜನೆಗೆ ಸ್ವಾಮೀಜಿಗಳು ಬೆಂಬಲಿಸಿದ್ದಾರೆ ಎಂಬ ಸುಳ್ಳಿನ ಮೂಲಕ ಸಮಾಜದ ದಾರಿ ತಪ್ಪಿಸಿದ್ದರು. ಯಡಿಯೂರಪ್ಪ ಅವರನ್ನು ಅಗೌರವದಿಂದ ನಡೆಸಿಕೊಂಡಿದ್ದರು. ಈಗ ಮೊಸಳೆ ಕಣ್ಣೀರು ಸುರಿಸುತ್ತಿರುವುದರ ಹಿಂದೆ ರಾಜಕೀಯ ಲಾಭ ಪಡೆಯುವ ದುರುದ್ದೇಶವಿದೆ ಎಂದು ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಮಾಡದಂತೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಎಂ ಬಿ ಪಾಟೀಲ್ ವಿರುದ್ಧ ಬಿಜೆಪಿ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.
ವೀರೇಂದ್ರ ಪಾಟೀಲ್‌ರನ್ನು ಸಿಎಂ ಸ್ಥಾನದಿಂದ ಅವಮಾನಕರ ರೀತಿಯಲ್ಲಿ ಬದಲಾಯಿಸುವ ಮೂಲಕ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ದ್ರೋಹ ಬಗೆದಿತ್ತು. ಲಿಂಗಾಯತ ಸಮುದಾಯದವರಿಗೆ ಸಿಎಂ ಪದವಿಯ ಅವಕಾಶವನ್ನು ಕಾಂಗ್ರೆಸ್ ವ್ಯವಸ್ಥಿತವಾಗಿ ತಪ್ಪಿಸಿದೆ. ಎಂ ಬಿ ಪಾಟೀಲ್ ಅವರೇ, ಈ ದ್ರೋಹದ ಇತಿಹಾಸವನ್ನು ಅವಲೋಕಿಸಿ ಎಂದು ಟಾಂಗ್ ನೀಡಿದೆ.
ಹಗಲು ರಾತ್ರಿ ಎನ್ನದೆ ಜಾತಿ ಜಪ ಮಾಡುವ ಒಬ್ಬ ಮೀರ್ಸಾದಿಕ್ನ ಮಾತು ಕೇಳಿ ಧರ್ಮವನ್ನೇ ಒಡೆಯುವುದಕ್ಕೆ ಪಣತೊಟ್ಟ ಕುಖ್ಯಾತಿ ಈ ಎಂ ಬಿ ಪಾಟೀಲ್ ಅವರದ್ದು. ಪಾಟೀಲರೇ, ರಾಜಕೀಯ ಲಾಭಕ್ಕಾಗಿ ವೀರಶೈವ-ಲಿಂಗಾಯತ ಎಂಬ ಮತಭೇದ ಸೃಷ್ಟಿಸಿದ ನೀವೀಗ, ಪ್ರವಾದಿಯ ಪೋಷಾಕು ತೊಟ್ಟರೆ ಜನ ನಂಬುತ್ತಾರೆಯೇ ಎಂದು ಬಿಜೆಪಿ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಲಿಂಗಾಯತ - ವೀರಶೈವ ಪ್ರತ್ಯೇಕ ಧರ್ಮ ಸ್ಥಾಪನೆ ಸಂದರ್ಭದಲ್ಲಿ ಪ್ರಮುಖ ಮಠಾಧೀಶರು ಹಾಗೂ ಪ್ರಮುಖ ಲಿಂಗಾಯತ ನಾಯಕರಿಗೆ ಎಂ ಬಿ ಪಾಟೀಲ್ ಅವರು ನೀಡಿದ ಅಗೌರವ, ಆಡಿದ ಮಾತುಗಳನ್ನು ಮತ್ತೆ ನೆನಪಿಸಬೇಕೇ? ಉಂಡ ಮನೆಗೆ ಕನ್ನ ಹಾಕುವ ಎಂ.ಬಿ. ಪಾಟೀಲ್ ಅವರಂತವರು ಕ್ಷಮೆಗೆ ಅನರ್ಹರು. ವೀರಶೈವ - ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಕೈ ಹಾಕಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಈ ಹಿಂದೆ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದರು. ಆದರೆ, ಧರ್ಮ ವಿಭಜಕ ಎಂ ಬಿ ಪಾಟೀಲ್ ಅದನ್ನು ಸಮರ್ಥಿಸಿಕೊಳ್ಳುವ ಮೂಲಕ ಜಾತಿ ವಿಭಜಕ ಮೀರ್ಸಾದಿಕ್ನಿಗೆ ತಾವು ತಕ್ಕ ಶಿಷ್ಯ ಎಂದು ನಿರೂಪಿಸಿಕೊಂಡರು ಎಂದು ಹರಿಹಾಯ್ದಿದೆ.
ನಾನು ಆತ್ಮಸಾಕ್ಷಿಯಾಗಿ ಯಡಿಯೂರಪ್ಪ ಅವರಿಗೆ ಬೆಂಬಲ ನೀಡಿದ್ದೇನೆ - ಎಂ ಬಿ ಪಾಟೀಲ್ ಆತ್ಮಸಾಕ್ಷಿ...!? ಹಾಗೆಂದರೇನು ಪಾಟೀಲರೇ?ನೀವು ಸಚಿವರಾಗಿದ್ದಾಗ ಬಿಜೆಪಿಯ ಅತ್ಯುನ್ನತ ನಾಯಕ ಬಿಎಸ್ ಯಡಿಯೂರಪ್ಪ ಅವರಿಗೆ ಬಳಸಿದ ಪದಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಈಗ ಕಣ್ಣೊರೆಸುವ ತಂತ್ರದ ಹಿಂದಿರುವ ರಾಜಕೀಯ ಕುತಂತ್ರವೇನು!?ಮಜಾವಾದಿ ಮೀರ್ ಸಾದಿಕ್ ಹಾಗೂ ಮಹಾನಾಯಕನ ದಿಲ್ಲಿ ಪ್ರವಾಸದ ಉದ್ದೇಶವೇನು? ರಾಜ್ಯದಲ್ಲಿ ವೀರಶೈವ ಮತ್ತು ಲಿಂಗಾಯತ ವಿಭಜನೆ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಅಧಿನಾಯಕಿಯ ಒಪ್ಪಿಗೆ ಪಡೆಯುವುದಕ್ಕಾಗಿಯೇ?
ಎಂ.ಬಿ. ಪಾಟೀಲರ ಕಸರತ್ತಿನ ಹಿಂದಿರುವ ಗಾಂಧಿ ಕುಟುಂಬದ ಪಾತ್ರವನ್ನು ಬಹಿರಂಗಪಡಿಸುವಿರಾ ಎಂದು ಕೆಪಿಸಿಸಿಯನ್ನು ಪ್ರಶ್ನಿಸಿದೆ?
ವೀರಶೈವ- ಲಿಂಗಾಯತ ವಿಭಜನೆ ವಿಚಾರದಲ್ಲಿ ತನ್ನ ನಿಲುವೇನು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಸ್ಪಷ್ಟಪಡಿಸಲೇ ಇಲ್ಲ. ತಮ್ಮ ದಿಲ್ಲಿ ಭೇಟಿ ಸಂದರ್ಭದಲ್ಲಾದರೂ ಮೀರ್ ಸಾದಿಕ್ ಹಾಗೂ ಮಹಾನಾಯಕ ಈ ಬಗ್ಗೆ ನಿಲುವು ಬಹಿರಂಗ ಪಡಿಸುವಂತೆ ಕಾಂಗ್ರೆಸ್ ವರಿಷ್ಠರ ಮೇಲೆ ಒತ್ತಡ ಹೇರುತ್ತಾರೆಯೇ? ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬದಲಾವಣೆ? ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೆಹಲಿಯಲ್ಲಿ ಪಟ್ಟು ? ಡಿಕೆಶಿ ಅವರ ಒಂದು ವರ್ಷದ ಸಾಧನೆಗೆ ಯಾವುದೇ ಅಂಕ ನೀಡುವುದಿಲ್ಲ ಎಂದು ಇತ್ತೀಚೆಗೆ ಹೇಳಿದ್ದ ಸಿದ್ದರಾಮಯ್ಯ, ಈಗ ಅದರ ಮುಂದುವರಿದ ಭಾಗವಾಗಿ ಡಿಕೆಶಿ ಬದಲಾವಣೆಗೆ ಒತ್ತಡ ತರುತ್ತಿದ್ದಾರೆಯೇ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಮುಂದೆ ಪ್ರಶ್ನೆಗಳ ಸುರಿಮಳೆಗೈದಿದೆ.