ಬೆಂಗಳೂರು: ಕಾಂಗ್ರೆಸ್ಸಿಗೂ ಘಜ್ನಿ ಸಂತತಿಗೂ ಬಹಳಷ್ಟು ಸಾಮ್ಯತೆಯಿದೆ ಎಂದು ಕಾಂಗ್ರೆಸ್‌ಗೆ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ. ಅಂದು ಘಜ್ನಿಗೆ ನಮ್ಮ ಸಂಸ್ಕೃತಿಯನ್ನು ನಾಶ ಮಾಡಲಾಗಲಿಲ್ಲವೋ, ಈಗಲೂ ಘಜ್ನಿ ಮನೋಧರ್ಮದ ಕಾಂಗ್ರೆಸ್‌ಗೆ ನಮ್ಮ ಸಂಸ್ಕೃತಿ, ದೇಶ, ಧರ್ಮವನ್ನು ಹಾಳುಗೆಡುವದಂತೆ ಬಿಜೆಪಿ ಸತತವಾಗಿ ತಡೆದಿದೆ. ಖುಷಿಯ ವಿಚಾರವೆಂದರೆ ಇದಕ್ಕೆ ಜನತೆಯ ಆಶೀರ್ವಾದವೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ ಎಂದು ತಿಳಿಸಿದೆ.
ಭಾರತದ ಧಾರ್ಮಿಕ, ಸಾಂಸ್ಕೃತಿಕ ಶ್ರೀಮಂತಿಕೆಯ ಖಜಾನೆಯಾಗಿದ್ದ ಗುಜರಾತಿನ ಸೋಮನಾಥ ಜ್ಯೋತಿರ್ಲಿಂಗ ದೇವಾಲಯದ ಮೇಲೆ ಘಜ್ನಿ ಮಹಮ್ಮದ್ 17 ಬಾರಿ ದಾಳಿ ಮಾಡಿದ್ದರೂ ಇಂದಿಗೂ ನಮ್ಮ ಸಂಸ್ಕೃತಿ ಉಳಿದಿದೆ. ಇದರ ವಿರುದ್ಧ ನಿಂತಿದ್ದು ಬಿಜೆಪಿ. ಗುಜರಾತ್‌ನಲ್ಲಿ ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿಗೆ ಮಣೆ ಹಾಕಿದಂತೆ, ಕರ್ನಾಟಕದಲ್ಲೂ ಡಬಲ್ ಎಂಜಿನ್ ಸರ್ಕಾರದ ಜನಪರ ಆಡಳಿತ, ಅಭಿವೃದ್ಧಿಗೆ ಗುಜರಾತ್ ಮಾದರಿಯ ಗೆಲುವನ್ನು ಬಿಜೆಪಿಗೆ ಜನ ನೀಡಲಿದ್ದಾರೆ. ಈ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ಹೆದರಿ ಬಿಜೆಪಿ ವಿರುದ್ಧ ದಿನಕ್ಕೊಬ್ಬರಂತೆ ಅಪಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದೆ.