ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಪೇ ವಾರ್ ಇಂದೂ ಕೂಡಾ ಮುಂದುವರೆದಿದೆ. ಕಾಂಗ್ರೆಸ್ನ ಸೇ ಸಿಎಂ ಅಭಿಯಾನಕ್ಕೆ ಪ್ರತಿಯಾಗಿ ಬಿಜೆಪಿ ವಾಚ್ ಪೇ, ಪಿಲ್ಲೋ ಪೇ ಪ್ರಸ್ತಾಪಿಸಿದೆ. ಸಿದ್ದರಾಮಯ್ಯ ಅವರ ಪಂಚೆ ಮಾತ್ರ ಶುಭ್ರ, ಮೈಯೆಲ್ಲಾ ಭ್ರಷ್ಟಾಚಾರದ ಕೊಳೆ! ಎಂದು ಟೀಕಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
ಗಾಳಿಯಲ್ಲಿ ಗುಂಡು ಹೊಡೆದಂತೆ, ಕೇವಲ ಸಾಕ್ಷ್ಯ ರಹಿತ ಆರೋಪ ಮಾಡಿದ್ದೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಾಧನೆ!. ಸಿದ್ದರಾಮಯ್ಯ ಅವರೇ, ಯಾವ ಕಾರಣಕ್ಕಾಗಿ ನಿಮಗೆ ದುಬಾರಿ ವಾಚ್ ಉಡುಗೊರೆಯಾಗಿ ಸಿಕ್ಕಿದ್ದು? ನೀವು ವಾಚ್ ಪೇ ಮೂಲಕ ಪಡೆದ ಲಂಚವೆಷ್ಟು? ಟಾಯ್ಲೆಟ್ ಚೊಂಬಿನಲ್ಲಿ ಲಂಚ, ಹಾಸ್ಟೆಲ್ ದಿಂಬಿನಲ್ಲಿ ಲಂಚ!. ಸಿದ್ದರಾಮಯ್ಯ ಅವರೇ, ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಹಾಸ್ಟೆಲ್ ಅನುದಾನವನ್ನು ಕಬಳಿಸಿದವರು ನಿಮ್ಮ ಸಂಪುಟದಲ್ಲಿ ಸಚಿವರಾಗಿದ್ದು, ಮರೆತು ಹೋಯಿತೇ?. ಪಿಲ್ಲೋ ಪೇ ಹಗರಣದ ಸೂತ್ರಧಾರರು ನೀವೇ ಅಲ್ವೇ ಸಿದ್ದರಾಮಯ್ಯ? ಎಂದು ಬಿಜೆಪಿ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಸೇ ಡಿಕೆ:ಈಗ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ ಸೋಲಾರ್ ಹಗರಣದಲ್ಲಿ 'ಲಕ್ಷ್ಮಿ ಭಾಗ್ಯ' ಪಡೆದಿದ್ದು ಯಾರು? ಸಂಬಂಧಿಕರೇ ಸೋಲಾರ್ ಉತ್ಪಾದಕರಾಗಿದ್ದು, ಯಾರ ಕೃಪೆಯಿಂದ? ಈ ಹಗರಣದಲ್ಲಿ ಲಕ್ಷ್ಮಿ ಪೇ ಯಿಂದ ಎಷ್ಟು ಲಂಚ, ಪೇ ಡಿಕೆ ಆಗಿದೆ?
ಮೌನವೇಕೆ? ಸೇ ಡಿಕೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.