ಬೆಂಗಳೂರು : ಕೋಮುವಾದಿ ಬಿಜೆಪಿ ಪಕ್ಷ ರಾಜಕೀಯ ಲಾಭಕ್ಕಾಗಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತರುತ್ತಿದೆ ಎಂದು ಮಾಜಿ ಸಚಿವ ಡಾ. ಹೆಚ್ ಸಿ ಮಹಾದೇವಪ್ಪ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಭಾರತ ದೇಶದಲ್ಲಿ ಇಸ್ಲಾಂ ಧರ್ಮ ಪ್ರವೇಶಿಸುವುದಕ್ಕೆ ಮುಂಚೆಯೇ ಹಿಂದೂಗಳು ದನದ ಮಾಂಸವನ್ನು ಭಕ್ಷಿಸುತ್ತಿದ್ದರು. ಈ ಬಗ್ಗೆ ನಮ್ಮ ವೇದ ಪುರಾಣಗಳಲ್ಲೇ ಹಲವಾರು ಉಲ್ಲೇಖಗಳಿವೆ. ಈಗಲೂ ಅವುಗಳನ್ನು ನಾವು ಕಾಣಬಹುದು ಮತ್ತು ಓದಬಹುದು ಎಂದಿದ್ದಾರೆ.
ಹಿಂದೊಮ್ಮೆ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ "ಹಸಿವು ಮತ್ತು ಶ್ರೇಷ್ಠ ಕತೆ" ಎಂಬ ಕತೆಯೊಂದರಲ್ಲಿ ವಿಶ್ವಾಮಿತ್ರರು ಮಾತನಾಡುತ್ತಾ "ತಿನ್ನುವುದೇ ಶ್ರೇಷ್ಠವಲ್ಲ, ಕನಿಷ್ಠವೂ ಅಲ್ಲ. ತಾಳಲಾರದ ಹಸಿವಾದಾಗ ನಾನೊಮ್ಮೆ ನಾಯಿಯನ್ನೇ ತಿಂದೆ" ಎಂದು ಹೇಳುತ್ತಾರೆ. ಇನ್ನು ವೇದಗಳ ಕಾಲದಲ್ಲಿ ಹಸುವಿನ ಕರುವನ್ನು, ಕುದುರೆಯನ್ನು ಹೋಮ ಹವನಗಳಿಗೆ ಬಳಸಿ ಸೇವಿಸುತ್ತಿದ್ದರೆಂಬ ವಿವರಗಳು ದಾಖಲಾಗಿವೆ.
ಸ್ವತಃ ಸ್ವಾಮಿ ವಿವೇಕಾನಂದರೇ ತಮ್ಮ ಪತ್ರವೊಂದರಲ್ಲಿ ದನದ ಮಾಂಸ ತಿನ್ನದ ಬ್ರಾಹ್ಮಣ ಬ್ರಾಹ್ಮಣನೇ ಅಲ್ಲವೆಂಬ ರೀತಿ ಹೇಳಿದ್ದಾರೆ. ಇದರ ಅರ್ಥ ದನದ ಮಾಂಸದ ಸೇವನೆಗೆ ಬ್ರಾಹ್ಮಣರಲ್ಲಿ ಎಷ್ಟು ಮಹತ್ವವಿತ್ತು ಎಂಬುದಾಗಿದೆ ಎಂದು ವಿವರಿಸಿದ್ದಾರೆ.