ಬೆಂಗಳೂರು: ಮಕರ ಸಂಕ್ರಮಣ ಮುಗಿಯುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಚುನಾವಣಾ ಕಾವು ಜೋರಾಗಿದ್ದು, ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್ನ ಪ್ರಮುಖ ನಾಯಕರು ಆಗಮಿಸುತ್ತಿದ್ದಾರೆ. ಬಿಜೆಪಿ ಪರ ಪ್ರಚಾರ ಕಾರ್ಯ ನಡೆಸಲಿದ್ದು, ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಜೊತೆಗೆ ಸಂಘಟನಾತ್ಮಕ ಚಟುವಟಿಕೆಗೆ ಚುರುಕು ನೀಡಲಿದ್ದಾರೆ. ಮೋದಿ, ಅಮಿತ್ ಶಾ ಜೋಡಿಯ ಮೋಡಿ ಜೊತೆಗೆ ಯೋಗಿ ಆದಿತ್ಯನಾಥರ ಮೂಲಕ ನಾಥ ಪರಂಪರೆಯ ಶ್ರೀಗಳನ್ನು ಸೆಳೆಯುವ ಕೆಲಸವನ್ನೂ ಮಾಡಲಾಗುತ್ತಿದೆ.
ಮುಂದಿನ ಒಂದು ತಿಂಗಳಿನಲ್ಲಿ ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್ ನ ಪ್ರಭಾವಿ ರಾಜಕಾರಣಿಗಳ ದಂಡು ರಾಜ್ಯಕ್ಕೆ ಭರ್ಜರಿ ಪ್ರವೇಶ ಮಾಡುತ್ತಿದೆ. ಈಗಾಗಲೇ ಪ್ರಧಾನಿ ಮೋದಿ ಅವರು ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮ ಅಂತಿಮಗೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದು ಬಾರಿ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಒಂದು ಬಾರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಒಂದು ಬಾರಿ ರಾಜ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮಗಳು ಅಂತಿಮಗೊಂಡಿವೆ. ಚುನಾವಣೆ ಹಿನ್ನೆಲೆಯಲ್ಲಿ ಘಟಾನುಘಟಿ ನಾಯಕರು ರಾಜ್ಯ ಬಿಜೆಪಿಗೆ ಬೂಸ್ಟ್ ನೀಡಲು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.
ಜ.19 ಮತ್ತು ಫೆ.13ಕ್ಕೆ ಪ್ರಧಾನಿ ಮೋದಿ:ಜನವರಿ 12 ರಂದು ಹುಬ್ಬಳ್ಳಿಯ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ವಾರದಲ್ಲೇ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಜ.19 ರಂದು ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ನಾರಾಯಣಪುರ ಎಡದಂಡೆ ಕಾಲುವೆ ಜಾಲದ ವಿಸ್ತರಣೆ ನವೀಕರಣ ಮತ್ತು ಆಧುನೀಕರಣ ಕಾಮಗಾರಿ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ, ಜಲ್ ಜೀವನ್ ಮಿಷನ್ ಅಡಿ ಯಾದಗಿರಿಯಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಚನ್ನೈ ಸುರತ್ ಎಕ್ಸ್ ಪ್ರೆಸ್ ವೇ ಪ್ಯಾಕೇಜ್-3 ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಂತರ ಕಲ್ಬುರ್ಗಿಯ ಮಳಖೇಡಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ 51 ಸಾವಿರಕ್ಕೂ ಅಧಿಕ ಲಂಬಾಣಿ ತಾಂಡಾ, ಕುರುಬರ ಹಟ್ಟಿ ಮುಂತಾದ ಕಡೆಗಳಲ್ಲಿ ವಾಸಿಸುವ ಜನರಿಗೆ, ಅವರ ವಾಸಸ್ಥಳದ ಹಕ್ಕುಪತ್ರ ವಿತರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ. ಇದೇ ವೇಳೆ, ಕಲಬುರಗಿಯಲ್ಲಿ ಬಂಜಾರ ಸಮಾವೇಶ ನಡೆಸುವ ಯೋಜನೆಯನ್ನು ರಾಜ್ಯ ಬಿಜೆಪಿ ಘಟಕ ಹಾಕಿಕೊಂಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.
ಜನವರಿ ನಂತರ ಫೆಬ್ರವರಿ 13 ರಂದು ಮತ್ತೊಮ್ಮೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ನಗರದ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ 2023ಕ್ಕೆ ಚಾಲನೆ ನೀಡಲಿದ್ದಾರೆ. ಈ ಪ್ರವಾಸದ ವೇಳೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮಗಳ ಆಯೋಜನೆ ಜೊತೆಗೆ ಬೆಂಗಳೂರು ಸಮೀಪದಲ್ಲೇ ಬೃಹತ್ ಸಮಾವೇಶವನ್ನು ಆಯೋಜನೆ ಮಾಡುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಆ ಮೂಲಕ ಮೋದಿ ಮೋಡಿ ರಾಜ್ಯದಲ್ಲಿ ಆಗುವಂತೆ ನೋಡಿಕೊಳ್ಳಲು ರಾಜ್ಯದ ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಜ.25 ಕ್ಕೆ ಅಮಿತ್ ಶಾ ಪ್ರವಾಸ:ಜನವರಿ 25 ಕ್ಕೆ ರಾಜ್ಯಕ್ಕೆ ಮತ್ತೊಮ್ಮೆ ಅಮಿತ್ ಶಾ ಪ್ರವಾಸ ಕೈಗೊಳ್ಳಲಿದ್ದಾರೆ. ಮಂಡ್ಯ, ಬೆಂಗಳೂರು ಪ್ರವಾಸದ ವೇಳೆಯಲ್ಲಿ ಘೋಷಣೆ ಮಾಡಿದ್ದಂತೆ ಜನವರಿ ತಿಂಗಳಾಂತ್ಯಕ್ಕೆ ಅಮಿತ್ ಶಾ ಮತ್ತೆ ಆಗಮಿಸುತ್ತಿದ್ದು, ಹಳೆ ಮೈಸೂರು ಭಾಗದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಮತದಾರರನ್ನು ಸೆಳೆಯುವ ಕೆಲಸ ಮಾಡಲಿದ್ದಾರೆ. ಇದೇ ವೇಳೆ, ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿ ಚುನಾವಣಾ ಪ್ರಚಾರದ ಕಾರ್ಯತಂತ್ರಗಳ ಬ್ಲೂಪ್ರಿಂಟ್ ಅನ್ನು ರಾಜ್ಯದ ನಾಯಕರಿಗೆ ನೀಡಲಿದ್ದಾರೆ ಎನ್ನಲಾಗಿದೆ.