ಬೆಂಗಳೂರು: ನಾಳೆ ಮೈತ್ರಿ ಸರ್ಕಾರ ಸಹಜವಾಗಿಯೇ ಅಧಿಕಾರ ಕಳೆದುಕೊಳ್ಳಲಿದೆ. ಇದರಿಂದ ಸಹಜವಾಗಿ ಬಿಜೆಪಿ ಬಹುಮತ ಪಡೆಯುವ ಅವಕಾಶವಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶವನ್ನು ಭಾರತೀಯ ಜನತಾ ಪಕ್ಷ ಸ್ವಾಗತಿಸುತ್ತದೆ. ಕೆಲ ಕಾಂಗ್ರೆಸ್ ನಾಯಕರು ಅತೃಪ್ತರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಅನರ್ಹ ಮಾಡುತ್ತೇವೆಂದು ಹೆದರಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಶಾಸಕರ ಮೇಲೆ ಒತ್ತಡ ಹಾಕುವಂತಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಮೈತ್ರಿ ನಾಯಕರಿಗೆ ಇದು ಶೋಭೆ ತರುವಂತದ್ದಲ್ಲ. ಸಿಎಂ ಕುಮಾರಸ್ವಾಮಿ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ. ಹೀಗಾಗಿ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.