ಬೆಂಗಳೂರು :ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಪ್ರಯತ್ನದಿಂದ ರೈತರಿಗೆ ಸಿಕ್ಕ ಜಮೀನನ್ನ ಇದೀಗ ಬಿಜೆಪಿ ಕಿತ್ತುಕೊಳ್ಳಲು ಹೊರಟಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ರಾಜ್ಯದ ರೈತರ ಜಮೀನು ಕಿತ್ತುಕೊಳ್ಳಲು ಬಿಜೆಪಿ ಮುಂದಾಗಿದೆ.. ಕಾಂಗ್ರೆಸ್ ನಾಯಕರ ಆರೋಪ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಕಷ್ಟಪಟ್ಟು ಸಂಪಾದಿಸಿದ್ದ ಜಮೀನನ್ನ ಕಿತ್ತುಕೊಂಡು ಅವರನ್ನು ಬೀದಿಗೆ ತರುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ ಸಾಕಷ್ಟು ಜಮೀನು ಖರೀದಿ ಮಾಡಲಾಗಿದೆ. ಕೈಗಾರಿಕೋದ್ಯಮಿಗಳು ಬೆಂಗಳೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಾಗೂ ಜಿಲ್ಲೆಗಳಲ್ಲಿ ಸಾಕಷ್ಟು ಜಮೀನು ಖರೀದಿ ಮಾಡಿದ್ದಾರೆ.
ಇವರಲ್ಲಿ ಯಾರು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ ಎಂಬುದನ್ನು ತಿಳಿಸಿ. ಸಾಕಷ್ಟು ರೈತರಿಗೆ ಅನ್ಯಾಯವಾಗುತ್ತಿದೆ. ಈಗ ಹೋರಾಟ ಜನರ ಮುಂದೆ ಬಂದಿದೆ. ಜನ ಹೋರಾಟದ ಮೂಲಕ ಕಾಂಗ್ರೆಸ್ ಜೊತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದ ರೈತರ ಜಮೀನು ಕಿತ್ತುಕೊಳ್ಳಲು ಬಿಜೆಪಿ ಮುಂದಾಗಿದೆ.. ಕಾಂಗ್ರೆಸ್ ನಾಯಕರ ಆರೋಪ ಕಾಂಗ್ರೆಸ್ ಕಿಸಾನ್ ಮೋರ್ಚಾ ಅಧ್ಯಕ್ಷ ಸಚಿನ್ ಮೀಗಾ ಮಾತನಾಡಿ, ಭರವಸೆಯನ್ನು ಪೂರ್ಣಗೊಳಿಸುವ ಹೇಳಿಕೆಯನ್ನು ನರೇಂದ್ರ ಮೋದಿ ಪ್ರಧಾನಿಯಾದ ದಿನದಿಂದಲೂ ನೀಡುತ್ತಾ ಬಂದಿದ್ದಾರೆ. ಕೈಗಾರಿಕೋದ್ಯಮಿಗಳು ಅನುಕೂಲಕ್ಕೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆಯೇ ಹೊರತು, ರೈತರ ಪರ ಯಾವ ಕೆಲಸವನ್ನೂ ಮಾಡಿಲ್ಲ. ರೈತರ ಭೂಮಿ ಹೊಡೆದು ಕೈಗಾರಿಕೋದ್ಯಮಿಗಳಿಗೆ ನೀಡುವುದು ಇವರ ಧ್ಯೇಯ.
ನಮ್ಮ-ನಿಮ್ಮೆಲ್ಲರ ಸಂಘಟಿತ ಹೋರಾಟ ಇಂದಿಗೆ ನಿಲ್ಲುವುದಿಲ್ಲ. ರೈತರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ನಾವು ಮುಂಚೂಣಿಯಲ್ಲಿ ನಿಲ್ಲಬೇಕು. ಇದುವರೆಗೆ ರೈತರ ದುಡ್ಡನ್ನು ಯಾರು ಹೊಡೆಯಲು ಪ್ರಯತ್ನಿಸಲಿಲ್ಲ. ಆದರೆ, ಈಗ ಇಂತಹ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು.
ರಾಜ್ಯದ ರೈತರ ಜಮೀನು ಕಿತ್ತುಕೊಳ್ಳಲು ಬಿಜೆಪಿ ಮುಂದಾಗಿದೆ.. ಕಾಂಗ್ರೆಸ್ ನಾಯಕರ ಆರೋಪ ರೈತಸ್ನೇಹಿ ಕಾನೂನು ಕಾಂಗ್ರೆಸ್ ತಂದಿದೆ :ಭೂಸುಧಾರಣೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಬಹುದೊಡ್ಡ ತಪ್ಪಿನ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಹಿಂದೆ ಭೂಸುಧಾರಣೆ ಕಾಯ್ದೆ ಜಾರಿಗೆ ಬಂದಾಗ ಜಮೀನ್ದಾರರಾಗಿದ್ದ ಹಿಂದಿನ ಹಲವು ಬಿಜೆಪಿ ನಾಯಕರು ಜಮೀನು ಕಳೆದುಕೊಂಡಿದ್ದಾರೆ. ಒಂದು ಕಾಯ್ದೆ ಜಾರಿಗೆ ವಿರೋಧಿಸಿದವರು ಇಂದು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಏನಾದ್ರೂ ಜಮೀನು ನೀಡಿದ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ. ರೈತರಿಗೆ ಹಾಗೂ ಜನರಿಗೆ ಭೂಮಿ ಕೊಟ್ಟ ಪಕ್ಷ ಕಾಂಗ್ರೆಸ್. ದೇವರಾಜ ಅರಸು ಅವರ ಕಾಲದಿಂದ ಸಿದ್ದರಾಮಯ್ಯ ಕಾಲದವರೆಗೂ ರೈತರಿಗೆ ಅನುಕೂಲವಾಗುವ ಕಾನೂನುಗಳನ್ನು ಕಾಂಗ್ರೆಸ್ ತಂದಿದೆ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದರು.
ಅಂಬಾನಿ-ಅದಾನಿ ಉದ್ಧಾರಕ್ಕೆ ಸರ್ಕಾರ ಕೂತಿದೆ :ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಇವರಿಂದಾಗಿ ಕಾರ್ಮಿಕರಿಗೆ, ಯುವಕರಿಗೆ ಉದ್ಯೋಗವಿಲ್ಲ. ಅಂಗಡಿಗಳಿಗೆ ವ್ಯಾಪಾರ ಇಲ್ಲದಂತಾಗಿದೆ. ಎಲ್ಲವು ಖಾಸಗೀಕರಣಗೊಳ್ಳುತ್ತಿದ್ದು ಬಡತನ ಹೆಚ್ಚಾಗುತ್ತಿದೆ. ದೇಶದಲ್ಲಿಯೇ 26ನೇ ಶ್ರೀಮಂತನಾಗಿದ್ದ ಅಂಬಾನಿ ಇಂದು ವಿಶ್ವದಲ್ಲಿ 6ನೇ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದಾನೆ. ಇಂದು ದೇಶದಲ್ಲಿ ಶ್ರೀಮಂತರಾಗಿ ಇರುವವರೇ ಅಂಬಾನಿ ಹಾಗೂ ಅದಾನಿ ಅಂತಹ ಉದ್ಯಮಿಗಳು.
ಇಷ್ಟು ವರ್ಷ ರೈತರು ಇವರ ಕಣ್ಣಿಗೆ ಬಿದ್ದಿರಲಿಲ್ಲ. ಇದೀಗ ರೈತರ ಭೂಮಿಯನ್ನು ಕೈಗಾರಿಕೋದ್ಯಮಿಗಳಿಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅವರನ್ನು ಅಧಿಕಾರದಿಂದ ತೆಗೆಯದಿದ್ದರೆ ಯುವಕರು, ರೈತರು ಹಾಗೂ ಉದ್ಯೋಗಿಗಳು ಬದುಕಲು ಸಾಧ್ಯವಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಿತ್ತೊಗೆಯಲು ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕು. ಸಮಸ್ಯೆ ಬಗ್ಗೆ ಮಾತನಾಡಿದ್ರೆ ಪ್ರಯೋಜನವಿಲ್ಲ ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.
ರೈತ ವಿರೋಧಿ ಸರ್ಕಾರ: ಮಾಜಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಆಗಲಿದೆ ಎಂದು ಹೇಳಿದ್ದರು. ಅದಕ್ಕೆ ಜನ ಬೆಂಬಲಿಸಿ ಮತ ನೀಡಿ 25 ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದರು. ಆದರೆ, ಇಂದು ಕೇಂದ್ರ ಸರ್ಕಾರ ಜನರಿಗೆ ಮಾಡಿದ ಅನ್ಯಾಯ ಕಣ್ಮುಂದಿದೆ. ಕೃಷಿ ವಲಯವನ್ನು ಖಾಸಗೀಕರಣ ಮಾಡಿ ರೈತರಿಗೆ ಅನ್ಯಾಯ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಎಪಿಎಂಸಿಗಳಲ್ಲಿ ಒಂದಿಷ್ಟು ಸಮಸ್ಯೆಗಳು ಇರಬಹುದು. ಅದನ್ನು ಸರಿಪಡಿಸುವ ಬದಲು ನಿವಾರಿಸಲು ಮುಂದಾಗಿರುವುದು ಎಷ್ಟು ಸರಿ? ರೈತರ ಪರ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಎಳ್ಳಷ್ಟೂ ಕಾಳಜಿ ಇಲ್ಲ ಅನ್ನೋದು ಭೂ ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ಮುಂದಾಗಿರುವುದರಿಂದ ತಿಳಿಯುತ್ತದೆ. ಸರ್ಕಾರಗಳೇ ಕೈಕೊಟ್ಟರೆ ರೈತ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.