ಬೆಂಗಳೂರು:ಬಿಜೆಪಿ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಘೋಷಿಸಿದ್ದು, 189 ಜನರ ಹೆಸರು ಪ್ರಕಟಿಸಿದೆ. ಇದರಲ್ಲಿ 52 ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ. ಲಿಂಗಾಯತ 51 ಮಂದಿ, ಒಕ್ಕಲಿಗರು 41 ಜನ, ಒಬಿಸಿ 32 ಮಂದಿ, ಎಸ್ಸಿ 30, ಎಸ್ಟಿ 16 ಹಾಗೂ 9 ವೈದ್ಯರು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ, 8 ಮಂದಿ ಮಹಿಳೆಯರು, ಐವರು ವಕೀಲರು, ಮೂವರು ಶಿಕ್ಷಕರು, 9 ಸ್ನಾತಕೋತ್ತರ ಪದವೀಧರರಿಗೆ ಟಿಕೆಟ್ ಘೋಷಿಸಲಾಗಿದೆ.
ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ್, ಮನ್ಸುಖ್ ಮಾಂಡವೀಯ, ರಾಜ್ಯ ಬಿಜೆಪಿ ಸಹ ಚುನಾವಣಾ ಉಸ್ತುವಾರಿ ಕೆ.ಅಣ್ಣಾಮಲೈ, ಕೇಂದ್ರ ಗಣಿ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕುಟುಂಬ ರಾಜಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಬಜೆಪಿ ಎರಡು ಕಡೆ ರಾಜಕೀಯ ಹಿನ್ನೆಲೆಯುಳ್ಳವರ ಮಕ್ಕಳಿಗೆ ಟಿಕೆಟ್ ಕೊಟ್ಟಿದೆ. ನಿರೀಕ್ಷೆಯಂತೆ ಬಿ.ವೈ.ವಿಜಯೇಂದ್ರ ಅವರಿಗೆ ಶಿಕಾರಿಪುರದಿಂದ ಟಿಕೆಟ್ ಸಿಕ್ಕಿದೆ. ವಿಜಯೇಂದ್ರ ಅವರು ವರುಣಾದಿಂದ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಸ್ವತಃ ಯಡಿಯೂರಪ್ಪ ಅವರೇ ಬೇಡ ಎಂದು ಹೇಳಿದ್ದರು. ಅದರಂತೆ ವರುಣಾ ಕ್ಷೇತಕ್ಕೆ ವಿ.ಸೋಮಣ್ಣ ಅವರಿಗೆ ಟಿಕೆಟ್ ಕೊಡಲಾಗಿದೆ.