ಕರ್ನಾಟಕ

karnataka

ETV Bharat / state

ಬಿಜೆಪಿ 3ನೇ ಪಟ್ಟಿ ರಿಲೀಸ್​: ಜಗದೀಶ್‌ ಶೆಟ್ಟರ್ ವಿರುದ್ಧ ಟೆಂಗಿನಕಾಯಿ​; ಮಹದೇವಪುರಕ್ಕೆ ಮಂಜುಳಾ ಲಿಂಬಾವಳಿ - 2023 Karnataka Legislative Assembly election

ಭಾರಿ ಬಂಡಾಯದ ನಡುವೆಯೂ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರ ಕ್ಷೇತ್ರವಾದ ಶಿವಮೊಗ್ಗ ನಗರ ಮತ್ತು ಮಾನ್ವಿ ಕ್ಷೇತ್ರವನ್ನು ಖಾಲಿ ಬಿಡಲಾಗಿದೆ.

ಬಿಜೆಪಿ 3ನೇ ಪಟ್ಟಿ ರಿಲೀಸ್
ಬಿಜೆಪಿ 3ನೇ ಪಟ್ಟಿ ರಿಲೀಸ್

By

Published : Apr 17, 2023, 6:35 PM IST

Updated : Apr 17, 2023, 7:17 PM IST

ಬೆಂಗಳೂರು:ಭಾರಿ ಬಂಡಾಯದ ನಡುವೆಯೂ ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಸಂಜೆ ಬಿಡುಗಡೆ ಮಾಡಿದೆ. ಹುಬ್ಬಳ್ಳಿ -ಧಾರವಾಡ ಸೆಂಟ್ರಲ್​, ಮಹದೇವಪುರ ಸೇರಿದಂತೆ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಇನ್ನೆರಡು ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ.

ಮಾಜಿ ಸಿಎಂ ಜಗದೀಶ್​ ಶೆಟ್ಟರ್​ಗೆ ಟಿಕೆಟ್​ ನಿರಾಕರಿಸಿದ್ದ ಹುಬ್ಬಳ್ಳಿ ಸೆಂಟ್ರಲ್​ ಕ್ಷೇತ್ರದಿಂದ ಮಹೇಶ್ ಟೆಂಗಿನಕಾಯಿ, ಮಹದೇವಪುರ ಕ್ಷೇತ್ರದಲ್ಲಿ ಅರವಿಂದ ಲಿಂಬಾವಳಿ ಬದಲಿಗೆ ಅವರ ಪತ್ನಿ ಮಂಜುಳಾ ಅವರಿಗೆ ಟಿಕೆಟ್​ ನೀಡಲಾಗಿದೆ. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರವಾದ ಶಿವಮೊಗ್ಗ ನಗರ ಮತ್ತು ಮಾನ್ವಿ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.

ಇದನ್ನೂ ಓದಿ:ಬಿಜೆಪಿ 2ನೇ ಪಟ್ಟಿ ಬಿಡುಗಡೆ: ಏಳು ಶಾಸಕರ ಕೈ ತಪ್ಪಿದ ಟಿಕೆಟ್

ಬಿಜೆಪಿ ಮೊದಲ ಪಟ್ಟಿಯಲ್ಲಿ 189 ಕ್ಷೇತ್ರ, ಎರಡನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಇದೀಗ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಖೈರು ಮಾಡಿದೆ. ಮೊದಲ ಪಟ್ಟಿಯಲ್ಲಿ 52 ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿತ್ತು. ಎರಡನೇ ಪಟ್ಟಿಯಲ್ಲಿ ಕೆಲ ಹೊಸಬರು ಸೇರಿ 23 ಮಂದಿಯನ್ನು ಘೋಷಿಸಲಾಗಿತ್ತು. ಈ ವೇಳೆ 6 ಹಾಲಿ ಶಾಸಕರಿಗೆ ಟಿಕೆಟ್​ ನಿರಾಕರಣೆ ಮಾಡಲಾಗಿತ್ತು.

ಮೂರನೇ ಪಟ್ಟಿಯಲ್ಲಿನ ಅಭ್ಯರ್ಥಿಗಳು:ಹುಬ್ಬಳ್ಳಿ ಧಾರವಾಡ ಸೆಂಟ್ರಲ್- ಮಹೇಶ್ ಟೆಂಗಿನಕಾಯಿ, ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರಕ್ಕೆ- ಉಮೇಶ್ ಶೆಟ್ಟಿ, ಹೆಬ್ಬಾಳ ಕ್ಷೇತ್ರ- ಕಟ್ಟಾ ಜಗದೀಶ್​, ಮೈಸೂರಿನ ಕೃಷ್ಣರಾಜ ಕ್ಷೇತ್ರ- ಶ್ರೀವತ್ಸ, ಹಗರಿಬೊಮ್ಮನಹಳ್ಳಿ ಕ್ಷೇತ್ರ- ಬಿ.ರಾಮಣ್ಣ, ನಾಗಠಾಣ ಕ್ಷೇತ್ರ- ಸಂಜಯ್ ಐಹೊಳೆ, ಸೇಡಂ ಕ್ಷೇತ್ರ- ರಾಜಕುಮಾರ ಪಾಟೀಲ್, ಕೊಪ್ಪಳ ಕ್ಷೇತ್ರ- ಮಂಜುಳಾ ಅಮರೇಶ್(ಸಂಗಣ್ಣ ಕರಡಿಯವರ ಹಿರಿಯ ಸೊಸೆ), ರೋಣ ಕ್ಷೇತ್ರ- ಕಳಕಪ್ಪ ಬಂಡಿ

ಯಾರಿಗೆಲ್ಲಾ ಟಿಕೆಟ್​ ಮಿಸ್​:ಕೆಲ ಕ್ಷೇತ್ರಗಳಲ್ಲಿ ಕಗ್ಗಂಟಾಗಿದ್ದ ಮತ್ತು ಬಂಡಾಯವನ್ನು ಬದಿಗಿಟ್ಟು ಮೂರನೇ ಪಟ್ಟಿಯಲ್ಲೂ ಪಕ್ಷ ದಿಟ್ಟ ನಿರ್ಧಾರ ತಳೆದಿದೆ. ಮೈಸೂರಿನ ಕೃಷ್ಣರಾಜ ಕ್ಷೇತ್ರದ ಹಾಲಿ ಶಾಸಕ ಎ.ರಾಮದಾಸ್​ರಿಗೆ ಟಿಕೆಟ್​​ ನೀಡಲಾಗಿಲ್ಲ. ಅವರ ಬದಲಿಗೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀವತ್ಸ ಎಂಬುವರಿಗೆ ಮಣೆ ಹಾಕಲಾಗಿದೆ. ಸಚಿವ ವಿ.ಸೋಮಣ್ಣ ಅವರು ಪ್ರತಿನಿಧಿಸುತ್ತಿದ್ದ ಗೋವಿಂದರಾಜನಗರ ಕ್ಷೇತ್ರಕ್ಕೆ ಅವರ ಪುತ್ರ ಅರುಣ್​ ಸೋಮಣ್ಣಗೆ ಟಿಕೆಟ್​ ನೀಡಲಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ, ನಿರೀಕ್ಷೆ ಹುಸಿಯಾಗಿದ್ದು, ಉಮೇಶ್ ​ಶೆಟ್ಟಿ ಎಂಬುವರಿಗೆ ಟಿಕೆಟ್​ ನೀಡಲಾಗಿದೆ.

ತೀವ್ರ ತಿಕ್ಕಾಟದ ಬಳಿಕ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಅವರ ಕ್ಷೇತ್ರವಾದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ಗೆ ಮಹೇಶ್​ ಟೆಂಗಿನಕಾಯಿ ಅವರಿಗೆ ಟಿಕೆಟ್​ ನೀಡಲಾಗಿದೆ. ಇಂದು ಬೆಳಗ್ಗೆಯಷ್ಟೇ ಜಗದೀಶ್​ ಶೆಟ್ಟರ್​ ಅವರು ಬಿಜೆಪಿಗೆ ಗುಡ್​ಬೈ ಹೇಳಿ ಕಾಂಗ್ರೆಸ್​ಗೆ ಸೇರ್ಪಡೆಯಾದರು. ಇದಲ್ಲದೇ, ಕೊಪ್ಪಳದಲ್ಲಿ ಸಂಗಣ್ಣ ಕರಡಿಗೆ ಟಿಕೆಟ್​ ನಿರಾಕರಿಸಿ ಮಂಜುಳಾ ಅಮರೇಶ್ ಅವರಿಗೆ ಬಿ-ಫಾರಂ ನೀಡಲಾಗಿದೆ. ಸೇಡಂ ಕ್ಷೇತ್ರದಲ್ಲಿ ರಾಜಕುಮಾರ್​ ಪಾಟೀಲ್​ ಅವರಿಗೆ ಟಿಕೆಟ್​ ಘೋಷಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: 189 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Last Updated : Apr 17, 2023, 7:17 PM IST

ABOUT THE AUTHOR

...view details