ಬೆಂಗಳೂರು:212 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಬಿಜೆಪಿ ಹೈಕಮಾಂಡ್ಗೆ ಬಾಕಿ ಉಳಿದಿರುವ 12 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಜಟಿಲವಾಗಿದ್ದು, ಮತ್ತೊಮ್ಮೆ ರಾಜ್ಯ ನಾಯಕರ ಜೊತೆ ಸರಣಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಈಗಾಗಲೇ ಘೋಷಣೆ ಮಾಡಿರುವ ಕ್ಷೇತ್ರಗಳಲ್ಲಿನ ಅಚ್ಚರಿ ಆಯ್ಕೆಗಳ ನಂತರ ನಡೆದ ಬೆಳವಣಿಗೆಗಳನ್ನೂ ಅವಲೋಕನ ಮಾಡಿರುವ ಹೈಕಮಾಂಡ್ ಅಳೆದು ತೂಗಿ ಮೂರನೇ ಪಟ್ಟಿ ಬಿಡುಗಡೆಗೆ ಸಜ್ಜಾಗಿದೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಕಳೆದ ರಾತ್ರಿ ಅಭ್ಯರ್ಥಿಗಳ ಆಯ್ಕೆ ಕುರಿತು ಮಹತ್ವದ ಸಭೆ ನಡೆದಿದೆ. ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪಾಲ್ಗೊಂಡಿದ್ದರು. ಈಗಾಗಲೇ ಘೋಷಣೆ ಮಾಡಿರುವ ಎರಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಟೆಕ್ನಿಕಲ್ ಪ್ರಾಬ್ಲಂ ಆಗಿದೆ. ಶಿರಹಟ್ಟಿ ಮತ್ತು ಕೂಡ್ಲಿಗಿಯ ಅಭ್ಯರ್ಥಿಗಳ ಟೆಕ್ನಿಕಲ್ ಪ್ರಾಬ್ಲಂ ಕುರಿತು ಚರ್ಚಿಸಿದ್ದು, ಇವರ ಜಾಗಕ್ಕೆ ಹೊಸ ಅಭ್ಯರ್ಥಿಗಳ ಆಯ್ಕೆ ಸಾಧ್ಯತೆ ಕುರಿತು ಸಮಾಲೋಚನೆ ನಡೆಸಲಾಗಿದೆ.
ಬಿಜೆಪಿ ತೊರೆದಿರುವ ಜಗದೀಶ್ ಶೆಟ್ಟರ್ ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಶತಾಯಗತಾಯ ಕ್ಷೇತ್ರವನ್ನು ಗೆದ್ದು ಬಿಜೆಪಿಯ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ ಎನ್ನುವ ಚರ್ಚೆ ನಡೆದಿದೆ. ಇದರ ಜೊತೆಗೆ ಜೊತೆಗೆ ಸವದಿ, ಶೆಟ್ಟರ್ ನಿರ್ಗಮನದಿಂದ ಅಗಿರೋ ಡ್ಯಾಮೇಜ್ ಕಂಟ್ರೋಲ್ಗೆ ತಂತ್ರಗಾರಿಕೆ ರೂಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು.