ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಪಂಚತಂತ್ರ, ಪಂಚಸೂತ್ರ ಎನ್ನುವ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಶೇ. 80ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆ ಬರುತ್ತಿದೆ. ಕಳೆದ ಬಾರಿ ಪೇಜ್ ಪ್ರಮುಖ ತಂದಿದ್ದೆವು, ಅದು ಯಶಸ್ವಿಯಾಗಿತ್ತು. ಇದೀಗ ಪಂಚರತ್ನ, ಪಂಚಸೂತ್ರ ವಿಧಾನ ತಂದಿದ್ದೇವೆ. ಒಂದೊಂದು ಸಮುದಾಯ ಗುರಿಯಾಗಿಟ್ಟುಕೊಂಡು ಇದನ್ನು ಮಾಡುತ್ತಿದ್ದೇವೆ. ರಾಜ್ಯದಲ್ಲಿ ಆರು ತಂಡ ಮಾಡಿಕೊಳ್ಳುತ್ತೇವೆ. ಗ್ರಾಮ ಸ್ವರಾಜ್ ಎಂಬ ಕಾರ್ಯಕ್ರಮ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಎರಡು ಕಾರ್ಯಕ್ರಮ ಮಾಡುತ್ತೇವೆ. ರಾಜ್ಯದ ನಗರ ಬಿಟ್ಟು ಎಲ್ಲಾ ಕಡೆ ಸಮಾವೇಶ ನಡೆಸುತ್ತೇವೆ. ಗ್ರಾಪಂ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದರು.
ನವೆಂಬರ್ 29ರಂದು ಸಮಾವೇಶ ನಡೆಯಲಿದೆ. ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಂದು ಸಮಾವೇಶ ನಡೆಯುತ್ತದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇದನ್ನು ಮುನ್ನಡೆಸುತ್ತಾರೆ. ನನ್ನೊಂದಿಗೆ ಸಚಿವರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಆರ್.ಅಶೋಕ್, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ನೇತೃತ್ವದ ಆರು ತಂಡಗಳು ಕಾರ್ಯನಿರ್ವಹಣೆ ಮಾಡಲಿದ್ದು, ಈ ತಂಡಗಳಲ್ಲಿ ಸಂಸದರು, ಸಚಿವರು, ಶಾಸಕರು ಇರಲಿದ್ದಾರೆ ಎಂದರು.
ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಪ್ರಧಾನಿಯವರು ಹೆಚ್ಚಿನ ನೆರವು ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ಗ್ರಾಮೀಣಾಭಿವೃದ್ಧಿಗೆ ನೆರವು ಕೊಟ್ಟಿದ್ದಾರೆ. ಪ್ರವಾಹಕ್ಕೆ ಹೆಚ್ಚಿನ ನೆರವು ಸಿಕ್ಕಿದೆ. ಗ್ರಾಪಂ ಚುನಾವಣೆಗಳು ಬಂದಿವೆ, ಇಲ್ಲಿ ಪಕ್ಷದ ಸಿಂಬಲ್ ಇಲ್ಲದಿರಬಹುದು. ಆದರೆ ಚುನಾವಣೆಯಲ್ಲಿ ಪಕ್ಷದ ಬೆಂಬಲವೂ ಇರುತ್ತದೆ. 5810 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದೆ. ಗ್ರಾಮೀಣ ಜನರ ಮನಸ್ಸನ್ನು ಗೆದ್ದವರಿಗೆ ಟಿಕೆಟ್ ನೀಡಲಾಗುತ್ತದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಅಂತವರಿಗೆ ಅವಕಾಶ ನೀಡಲಾಗುತ್ತದೆ. ಈ ಚುನಾವಣೆ ಮುಂದಿನ ಚುನಾವಣೆಗೆ ಬೇಸ್ ಆಗಲಿದೆ ಎಂದರು.