ಕರ್ನಾಟಕ

karnataka

ETV Bharat / state

ಅನುಕಂಪದ ಅಲೆ, ಬಂಡಾಯದ ಬಿಸಿ: ಬಸವಕಲ್ಯಾಣ ಗೆಲುವಿಗೆ ಪ್ರಯಾಸಪಡುತ್ತಿರುವ ಬಿಜೆಪಿ! - struggling to win Basavakalyana

ಏಪ್ರಿಲ್ 17ರಂದು ಬಸವಕಲ್ಯಾಣ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಆಡಳಿತಾರೂಢ ಬಿಜೆಪಿಗೆ ದೊಡ್ಡ ಮಟ್ಟದ ಸವಾಲುಗಳು ಎದುರಾಗಿವೆ. ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿಧನರಾದ ಶಾಸಕ ನಾರಾಯಣ ರಾವ್ ಪತ್ನಿ ಮಲ್ಲಮ್ಮ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಅನುಕಂಪದ ಅಲೆಯ ಲಾಭದ ಲೆಕ್ಕಾಚಾರ ಹಾಕಿದ್ದರೆ, ಅನುಕಂಪದ ಅಲೆಯನ್ನು ಎದುರಿಸಲು ಬಿಜೆಪಿ ಪರದಾಡುತ್ತಿದೆ. ಸರ್ಕಾರವನ್ನೇ ಅಖಾಡಕ್ಕಿಳಿಸಿ ಅಬ್ಬರದ ಪ್ರಚಾರ ನಡೆಸುತ್ತಿದೆ.

ಬಿಜೆಪಿ
ಬಿಜೆಪಿ

By

Published : Apr 15, 2021, 6:22 PM IST

ಬೆಂಗಳೂರು: ಬಿ.ನಾರಾಯಣ ರಾವ್ ನಿಧನದಿಂದ ತೆರವಾದ ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ಇರುವ ಅನುಕಂಪದ ಅಲೆ, ಬಂಡಾಯದ ಬಿಸಿ ನಡುವೆ ಗೆಲುವಿಗಾಗಿ ಬಿಜೆಪಿ ಪ್ರಯಾಸಪಡುತ್ತಿದೆ. ಘಟಾನುಘಟಿ ನಾಯಕರೊಂದಿಗೆ ಅಬ್ಬರದ ಪ್ರಚಾರ ನಡೆಸುತ್ತಿದೆ.

ಏಪ್ರಿಲ್ 17ರಂದು ಬಸವಕಲ್ಯಾಣ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಬಿಜೆಪಿಗೆ ದೊಡ್ಡ ಮಟ್ಟದ ಸವಾಲುಗಳು ಎದುರಾಗಿವೆ. ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿಧನರಾದ ಶಾಸಕ ನಾರಾಯಣ ರಾವ್ ಪತ್ನಿ ಮಲ್ಲಮ್ಮ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಅನುಕಂಪದ ಅಲೆಯ ಲಾಭದ ಲೆಕ್ಕಾಚಾರ ಹಾಕಿದ್ದರೆ, ಅನುಕಂಪದ ಅಲೆಯನ್ನು ಎದುರಿಸಲು ಬಿಜೆಪಿ ಪರದಾಡುತ್ತಿದೆ. ಸರ್ಕಾರವನ್ನೇ ಅಖಾಡಕ್ಕಿಳಿಸಿ ಅಬ್ಬರದ ಪ್ರಚಾರ ನಡೆಸುತ್ತಿದೆ.

ಸ್ಚತಃ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಅಭ್ಯರ್ಥಿ ಶರಣು ಸಲಗರ್ ಪರ ಮತಯಾಚನೆ ಮಾಡಿದ್ದಾರೆ. ಅಲ್ಲದೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದಾರೆ. ಸಚಿವರು, ಶಾಸಕರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದು, ಕಾಂಗ್ರೆಸ್ ಪಕ್ಷದ ಅನುಕಂಪದ ಅಲೆಯನ್ನು ಎದುರಿಸಲು ಸರ್ಕಸ್ ನಡೆಸುತ್ತಿದ್ದಾರೆ.

ಬಂಡಾಯದ ಬಿಸಿ:
ಒಂದು ಕಡೆ ಕಾಂಗ್ರೆಸ್ ಪರ ಇರುವ ಅನುಕಂಪದ ಅಲೆ ಬಿಜೆಪಿಗೆ ಸಂಕಷ್ಟ ತಂದಿದ್ದರೆ, ಮತ್ತೊಂದು ಕಡೆ ಬಂಡಾಯ ಬಿಜೆಪಿ ನಾಯಕರನ್ನು ಚಿಂತೆಗೆ ದೂಡಿದೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಹಾಗೂ ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ಖೂಬಾ ಪಕ್ಷೇತರವಾಗಿ ಕಣಕ್ಕಿಳಿದಿದ್ದು, ಬಿಜೆಪಿ ಪರ ಇರುವ ಮತಗಳು ವಿಭಜನೆಯಾಗುವ ಆತಂಕ ಸೃಷ್ಟಿಸಿದ್ದಾರೆ. ಇದಕ್ಕೆ ಪೂರಕವಾಗಿ ಖೂಬಾ ಸಮಾವೇಶಕ್ಕೆ ಸೇರುತ್ತಿರುವ ಜನಸ್ತೋಮ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.

ಮರಾಠಿಗರಿಂದ ವಿರೋಧ:
ಇನ್ನು ಬಿಜೆಪಿ ಅಭ್ಯರ್ಥಿಗೆ ಮರಾಠಿ ಸಮುದಾಯದ ವಿರೋಧ ವ್ಯಕ್ತವಾಗಿದೆ. ಸ್ಥಳೀಯ ಮರಾಠ ಸಮುದಾಯದ ಸಭೆಯಲ್ಲಿ ಭಾಗಿಯಾಗಲು ಸಂಸದ ಭಗವಂತ ಖೂಬಾ ಜೊತೆ ತೆರಳಿದ್ದ ಬಿಜೆಪಿ ಅಭ್ಯರ್ಥಿಗೆ ಪ್ರವೇಶ ನಿರಾಕರಿಸಲಾಗಿದೆ. ವೇದಿಕೆ ಏರಲೂ ಅವಕಾಶ ನೀಡದೆ, ಭಾಷಣ ಮಾಡಲೂ ಬಿಡದೆ ವಾಪಸ್ ಕಳಿಸಲಾಗಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದರೂ ಹಣ ಬಿಡುಗಡೆ ಮಾಡಿಲ್ಲ. ನಮ್ಮನ್ನು ಬಿಜೆಪಿ ಸರ್ಕಾರ ಕಡೆಗಣಿಸಿದೆ. ಕೊಟ್ಟ ಭರವಸೆ ಈಡೇರಿಸಿಲ್ಲ ಎನ್ನುವ ಅಸಮಾಧಾನ ವ್ಯಕ್ತಪಡಿಸಿ ಧಿಕ್ಕಾರ ಕೂಗಿ ಸಂಸದ ಹಾಗೂ ಅಭ್ಯರ್ಥಿ ಇಬ್ಬರನ್ನೂ ಪ್ರಚಾರಕ್ಕೆ ಅವಕಾಶ ನೀಡದೇ ಹೊರ ಕಳಿಸಲಾಗಿದೆ. ಇದರಿಂದಾಗಿ ಮರಾಠಿ ಸಮುದಾಯ ಮತಗಳು ಕೈ ತಪ್ಪುವ ಹೊಸ ಆತಂಕ ಬಿಜೆಪಿ ಪಾಳಯದಲ್ಲಿ ಶುರುವಾಗಿದೆ.

ಅನುಕಂಪದ ಅಲೆ, ಬಂಡಾಯದ ಬಿಸಿ, ಮರಾಠಿಗರ ವಿರೋಧವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇದೀಗ ಹೊಸ ರಾಜಕೀಯ ದಾಳ ಉರುಳಿಸಲು ಮುಂದಾಗಿದ್ದಾರೆ. ಖೂಬಾ ಪರ ಬಿಜೆಪಿ ಸಾಂಪ್ರದಾಯಿಕ ಮತಗಳು ಚಲಾವಣೆಯಾಗದಂತೆ ನೋಡಿಕೊಳ್ಳಬೇಕು. ಬಿಜೆಪಿ ಮತದಾರರು ಬಿಜೆಪಿ ಅಭ್ಯರ್ಥಿ ಪರ ನಿಲ್ಲುವಂತೆ ಮಾಡಬೇಕು. ಅದಕ್ಕೆ ಏನೆಲ್ಲಾ ಮಾಡಬೇಕೋ ಮಾಡಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸೂಚನೆ ನೀಡಿದ್ದಾರೆ. ಅದರಂತೆ ಬಿಜೆಪಿ ಮತಗಳು ಚದುರದಂತೆ ನೋಡಿಕೊಳ್ಳಲು ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ವೀರಶೈವ ಲಿಂಗಾಯತ ಸಮುದಾಯದ ಸಭೆ ನಡೆಸಿ ಸಮುದಾಯದ ಮತ ಬುಟ್ಟಿಯನ್ನು ಭದ್ರಪಡಿಸಿಕೊಳ್ಳುವ ಪ್ರಯತ್ನ ನಡೆಸಲಾಗಿದೆ.

ಇನ್ನು ಮರಾಠ ಸಮುದಾಯದ ವಿರೋಧವನ್ನು ಶಮನಗೊಳಿಸುವಂತೆಯೂ ಚುನಾವಣಾ ಉಸ್ತುವಾರಿಗಳಿಗೆ ಹಾಗೂ ಸ್ಥಳೀಯ ನಾಯಕರಿಗೆ ಸಿಎಂ ಸೂಚನೆ ನೀಡಿದ್ದಾರೆ. ಅದರಂತೆ ಮರಾಠ ಸಮುದಾಯದ ಸಂಘಟನೆಗಳ ಜೊತೆ ಬಿಜೆಪಿ ನಾಯಕರು ಮಾತುಕತೆ ನಡೆಸಿ ಮನವೊಲಿಕೆ ಕಾರ್ಯ ಮಾಡಲಿದ್ದಾರೆ ಎನ್ನಲಾಗಿದೆ.

ಮತದಾನಕ್ಕೆ ಎರಡು ದಿನ ಬಾಕಿ ಇರುವಾಗ ಬಿಜೆಪಿ ನಾಯಕರು ಪಕ್ಷದ ಸಾಂಪ್ರದಾಯಿಕ ಮತಗಳು ಚದುರದಂತೆ ನೋಡಿಕೊಳ್ಳಲು ಕಾರ್ಯತಂತ್ರ ರೂಪಿಸಿದ್ದು, ಇದು ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details