ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಒಂದು ಹೆಚ್ಚುವರಿ ಸ್ಥಾನ ಧಕ್ಕಿಸಿಕೊಂಡಿರುವ ಬಿಜೆಪಿ ಇದೀಗ ನಾಳೆ ನಡೆಯಲಿರುವ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎರಡು ಹೆಚ್ಚುವರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ನಾಲ್ಕೂ ಸ್ಥಾನ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಲು ಪ್ರಯತ್ನ ನಡೆಸುತ್ತಿದೆ. ಬಿಜೆಪಿ ವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ಹಾಲಿ ಸದಸ್ಯ ಅರುಣ್ ಶಹಾಪುರ್, ವಾಯುವ್ಯ ಪದವೀಧರ ಕ್ಷೇತ್ರಕ್ಕೆ ಹಾಲಿ ಸದಸ್ಯ ಹನುಮಂತ ರುದ್ರಪ್ಪ ನಿರಾಣಿ ಮತ್ತು ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಹೊಸದಾಗಿ ಆಯ್ಕೆಯಾಗಿರುವ ಎಂ.ವಿ. ರವಿಶಂಕರ್ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ತೊರೆದು ಬಂದಿರುವ ಹಾಲಿ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಕಣಕ್ಕಿಳಿಸಿದೆ. ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಯದ್ದು ಎರಡು ಕ್ಷೇತ್ರಗಳಾಗಿದ್ದು, ಅವುಗಳನ್ನು ಉಳಿಸಿಕೊಳ್ಳುವ ಜೊತೆಗೆ ಮತ್ತೆರಡು ಸ್ಥಾನದ ಮೇಲೂ ಕಣ್ಣಿಟ್ಟಿದೆ.
ಹೊರಟ್ಟಿ ಅದೃಷ್ಟ ಪರೀಕ್ಷೆ: ಏಳು ಬಾರಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಾ ಬಂದಿರುವ ಬಸವರಾಜ ಹೊರಟ್ಟಿ ಇದೀಗ ಎಂಟನೇ ಬಾರಿ ಅದೃಷ್ಟ ಪರೀಕ್ಷೆ ಎದುರಿಸುತ್ತಿದ್ದಾರೆ. ಆದರೆ ಈ ಬಾರಿ ಅವರು ಜೆಡಿಎಸ್ ಬದಲು ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ. ಈವರೆಗೂ ಹೊರಟ್ಟಿ ಸೋಲಿಸಲು ಪ್ರಯತ್ನಿಸಿ ಸೋತಿದ್ದ ಬಿಜೆಪಿ ಇದೀಗ ಅದೇ ಹೊರಟ್ಟಿ ಅವರ ಗೆಲುವಿಗೆ ಶ್ರಮಿಸಲು ಮುಂದಾಗಿದೆ.
ಬಿಜೆಪಿಯಿಂದ ಮೂವರು ಹಾಲಿ ಸದಸ್ಯರ ಸ್ಪರ್ಧೆ:ಅರುಣ್ ಶಹಾಪುರ, ಹನುಮಂತ ನಿರಾಣಿ ಹಾಗು ಬಸವರಾಜ ಹೊರಟ್ಟಿ ಮೂವರು ಹಾಲಿ ಸದಸ್ಯರು. ಮೂವರು ಆಯ್ಕೆಯಾಗುವ ವಿಶ್ವಾಸ ಬಿಜೆಪಿ ನಾಯಕರಿಗಿದೆ. ಹಾಗಾಗಿ ಮೂರೂ ಕ್ಷೇತ್ರದಲ್ಲೂ ಭರ್ಜರಿ ಪ್ರಚಾರ ಕಾರ್ಯ ನಡೆಸಲಾಗಿದೆ.
ದಕ್ಷಿಣ ಪದವೀಧರ ಕ್ಷೇತ್ರ ಕಠಿಣ:ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಹೊಸದಾಗಿ ಎಂ.ವಿ. ರವಿಶಂಕರ್ ಅವರಿಗೆ ಬಿಜೆಪಿ ಮಣೆ ಹಾಕಿದೆ. ಕಳೆದ ಡಿಸೆಂಬರ್ನಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಮೈಸೂರು ಚಾಮರಾಜನಗರ ವಿಧಾನ ಪರಿಷತ್ ದ್ವಿಸದಸ್ಯ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲುವ ಅವಕಾಶವಿದ್ದರೂ ಬಿಜೆಪಿ ಸೋತಿತ್ತು. ಈ ಹಿನ್ನೆಲೆಯಲ್ಲಿ ಈಗ ಅದೇ ವ್ಯಾಪ್ತಿಯಲ್ಲಿ ನಡೆಯುತ್ತಿರುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಕಠಿಣ ಸವಾಲಿದ್ದು, ಸಾಕಷ್ಟು ತಂತ್ರಗಾರಿಕೆ ಬಳಸಿ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ.
ಬೀಡು ಬಿಟ್ಟ ಉಸ್ತುವಾರಿಗಳು:ಬೆಳಗಾವಿ, ವಿಜಯಪುರ, ಚಿಕ್ಕೋಡಿ, ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿ ಒಳಗೊಂಡ ವಾಯುವ್ಯ ಶಿಕ್ಷಕರ ಕ್ಷೇತ್ರದ ಜವಾಬ್ದಾರಿ ಹೊತ್ತ ಹಿರಿಯ ಸಚಿವ ಗೋವಿಂದ ಕಾರಜೋಳ, ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ವೈ.ಎ. ನಾರಾಯಣಸ್ವಾಮಿ, ಶಶಿಲ್ ನಮೋಶಿ, ಮಾಜಿ ಎಂಎಲ್ಸಿ ಮಹಾಂತೇಶ್ ಕವಟಗಿಮಠ, ಶಾಸಕ ಪಿ. ರಾಜೀವ್, ತಂಡದ ಸಂಯೋಜಕ ಎಂಎಲ್ಸಿ ಎನ್. ರವಿಕುಮಾರ್ ಅವರೊಂದಿಗೆ ಕ್ಷೇತ್ರದಲ್ಲೇ ಬೀಡುಬಿಟ್ಟು ಪ್ರಚಾರ ನಡೆಸಿದ್ದರು.