ಬೆಂಗಳೂರು: ಕಾಂಗ್ರೆಸ್ ಕಚೇರಿಯಲ್ಲಿ ಬೇಕಾದರೆ ಇಂದಿರಾ ಕ್ಯಾಂಟೀನ್ ತೆರೆಯಲಿ, ನೆಹರು ಹುಕ್ಕಾ ಬಾರ್ ತೆರೆಯಲಿ, ಆದರೆ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಎಂದು ಬದಲಾಯಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೆಹರು, ಇಂದಿರಾ ಗಾಂಧಿ ಅವರ ಒಳ್ಳೆಯ ಕೊಡುಗೆಗಳನ್ನು ನೆನೆಯುತ್ತೇವೆ. ಆದರೆ, ಆರ್ಟಿಕಲ್ 370 ಯಂತಹ ಕೆಲವು ಎಡಬಿಡಂಗಿತನ ಮಾಡಿದ್ದಾರೆ. ಅವುಗಳನ್ನು ಸರಿಪಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಅವರ ಕೆಟ್ಟ ತೀರ್ಮಾನಗಳನ್ನು ನಾವು ಸರಿಪಡಿಸಲೇಬೇಕು. ದೇಶಕ್ಕೆ ನಾವು ಮೊದಲ ಆದ್ಯತೆ ನೀಡುತ್ತೇವೆ.
ಹಾಗಾಗಿಯೇ ದೇಶಕ್ಕೆ ಹಿತವಾದ ಎಲ್ಲ ತೀರ್ಮಾನಗಳನ್ನು ಮುಂದುವರಿಸುತ್ತೇವೆ. ನಮಗೆ ಯಾವುದೇ ಪೂರ್ವಗ್ರಹ ಇಲ್ಲ. ಹಾಗೆಯೇ ಅವರು ಮಾಡಿದ್ದೆಲ್ಲ ಸರಿ ಎನ್ನುವ ವ್ಯಾಮೋಹವೂ ಇಲ್ಲ ಎಂದರು.
ಹಣ ಹೊಡೆಯಲು ಕ್ಯಾಂಟೀನ್ ನಿರ್ಮಾಣ:
ಇಂದಿರಾ ಗಾಂಧಿ ಮೃತಪಟ್ಟಿದ್ದು 1984ರಲ್ಲಿ. 2017ರಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಬದ್ಧತೆಗಳ ರಾಜಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್ ಮಾಡುವುದಾದರೆ, ಹಿಂದಿನ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಮಾಡಬಹುದಾಗಿತ್ತು. ಆದರೆ, ರಾಜಕೀಯ ಕಾರಣ ಹಾಗೂ ಹಣ ಹೊಡೆಯಲು ಈಗ ಇದನ್ನು ಮಾಡಿದ್ದಾರೆ. ಪ್ರತಿದಿನ ಒಂದು ಸಂಖ್ಯೆಯೂ ಹೆಚ್ಚು ಕಮ್ಮಿ ಇಲ್ಲದಂತೆ ಕ್ಯಾಂಟೀನ್ ಬಿಲ್ ಮಾಡಿದ್ದಾರೆ.
ಕೋಟಿ ಕೋಟಿ ಹಣ ಖರ್ಚು ಮಾಡಿ ಕ್ಯಾಂಟೀನ್ ಕಟ್ಟಿದ್ದಾರೆ. ಅದೇನು ಫೈವ್ ಸ್ಟಾರ್ ಹೋಟೆಲ್ ಅಂದುಕೊಂಡಿದ್ದಾರಾ? ಅವರ ಎಟಿಎಂ ತುಂಬಿಸಿಕೊಳ್ಳಲು ತಂದಿರುವ ಯೋಜನೆಯನ್ನು ನಾವು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಈ ಕಾರಣಕ್ಕೆ ಇಂದಿರಾ ಕ್ಯಾಂಟೀನ್ಗೆ ನಮ್ಮ ವಿರೋಧವಿದೆ. ರಾಜಕೀಯ ಕಾರಣಕ್ಕೆ ಇಂದಿರಾ ಹೆಸರನ್ನು ನಾಮಕರಣ ಮಾಡಿರುವುದಕ್ಕೆ ನಾವು ವಿರೋಧ ಮಾಡುತ್ತಿದ್ದೇವೆ ಎಂದರು.
ರಾಜಕೀಯ ಉದ್ದೇಶವಿಲ್ಲ:
ಅನ್ನಪೂರ್ಣೇಶ್ವರಿ ರಾಜಕೀಯ ವ್ಯಕ್ತಿಯಲ್ಲ. ಅನ್ನದ ದೇವತೆ. ನಮ್ಮ ಸಂಸ್ಕೃತಿಯ ಒಂದು ಭಾಗ. ಅದಕ್ಕಾಗಿ ಅನ್ನಪೂರ್ಣೇಶ್ವರಿಯ ಹೆಸರನ್ನು ಇಡುವಂತೆ ಹೇಳಿದೆ. ಬೇರೆ ರಾಜಕಾರಣಿಗಳ ಹೆಸರು ಇಡುವಂತೆ ಹೇಳಿದರೆ ಅದು ರಾಜಕಾರಣವಾಗುತ್ತಿತ್ತು. ಅವರ ಉದ್ದೇಶ ನಿಜವಾಗಿಯೂ ಬಡವರಿಗೆ ಅನ್ನ ಕೊಡುವುದೇ ಆಗಿದ್ದರೆ ಅನ್ನಪೂರ್ಣೇಶ್ವರಿ ಯಾದರೇನು, ಇಂದಿರಾ ಎಂದಾದರೇನು.
ಅವರೇನು ಕಾಂಗ್ರೆಸ್ ದುಡ್ಡಲ್ಲಿ ಕೊಡುತ್ತಿದ್ದಾರಾ? ಹಾಗೆ ಅವರ ದುಡ್ಡಲ್ಲಿ ಕೊಡುವುದಾದರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ, ನೆಹರು ಹುಕ್ಕಾಬಾರ್ ತೆರೆಯಲಿ ಯಾರು ಬೇಡ ಎನ್ನುತ್ತಾರೆ ಎಂದರು.