ಬೆಂಗಳೂರು: ಹಿಜಾಬ್ ವಿವಾದವನ್ನು ವಿಷಯಾಂತರ ಮಾಡಲು ಕಾಂಗ್ರೆಸ್ ನಾಯಕರು ಈಶ್ವರಪ್ಪ ಹೇಳಿಕೆ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಅವರು ಯಾವುದೇ ತಪ್ಪು ಮಾಡಿಲ್ಲ, ಅವರ ಹೇಳಿಕೆ ವಿಷಯ ಇಟ್ಟುಕೊಂಡು ಯಾರು ಏನೂ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದೊಗೆ ಮಾತನಾಡಿದ ಅವರು, ಸೈನಿಕರ ಸರ್ಜಿಕಲ್ ಸ್ಟ್ರೈಕ್ ಅನ್ನೇ ಅನುಮಾನಿಸಿ ಅದಕ್ಕೆ ಸಾಕ್ಷಿ ಕೇಳಿದ್ದರು. ಅವರಿಗೆ ಈಶ್ವರಪ್ಪನವರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ.
ನಮ್ಮ ರಾಷ್ಟ್ರ ಧ್ವಜದ ಬಗ್ಗೆ ರಾಷ್ಟ್ರಭಕ್ತಿ ಬಗ್ಗೆ ಇವರ ಪ್ರಮಾಣ ಪತ್ರ ಬೇಕಿಲ್ಲ, ನಮ್ಮ ಬಾಯಲ್ಲಿ ಮೊದಲು ಬರುವುದೇ ಭಾರತ್ ಮಾತಾ ಕೀ ಜೈ, ಅದಿಲ್ಲದೇ ನಾವು ಭಾಷಣ ಆರಂಭಿಸುವುದೇ ಇಲ್ಲ. ಭಾರತ್ ಮಾತಾಕಿ ಜೈ ಎಂದವರು ಎಬಿವಿಪಿ, ಆರ್ಎಸ್ಎಸ್ನವರು ಎಂದು ಕಾಂಗ್ರೆಸ್ ಸಭೆಯಿಂದ ಹೊರಗೆ ಕಳಿಸುತ್ತಿದ್ದವರು ಈಗ ರಾಷ್ಟ್ರಪ್ರೇಮದ ಬಗ್ಗೆ ನಮಗೆ ಪಾಠ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಹಿಜಾಬ್ ವಿಷಯದಲ್ಲಿ ಕಾಂಗ್ರೆಸ್ ಹೈರಾಣಾಗಿದೆ:ಹಿಜಾಬ್ ವಿಷಯದಲ್ಲಿ ಕಾಂಗ್ರೆಸ್ನವರು ಹೈರಾಣಾಗಿದ್ದು, ಅದರ ವಿಷಯಾಂತರ ಮಾಡಲು ಈಶ್ವರಪ್ಪ ವಿಷಯ ಮಾತನಾಡುತ್ತಿದ್ದಾರೆ. ಈ ವಿಷಯ ಹಿಡಿದುಕೊಂಡು ಯಾರೂ ಏನು ಮಾಡಲು ಸಾಧ್ಯವಿಲ್ಲ. ಅವರು ಯಾವ ತಪ್ಪು ಮಾಡಿಲ್ಲ,ಈಶ್ವರಪ್ಪ ರಾಷ್ಟ್ರಧ್ವಜ ಇಳಿಸಿ ಭಗವಾಧ್ವಜ ಹಾರಿಸುತ್ತೇವೆ ಎಂದಿಲ್ಲ, ರಾಷ್ಟ್ರಧ್ವಜ ಎಲ್ಲರಿಗಿಂತ ಎತ್ತರವಿದೆ.
ಅಭಿಮಾನ ಇರುವರು ಭಗವಾಧ್ವಜ ಹಾರಿಸುತ್ತಾರೆ. ಮೇಲೆ ರಾಷ್ಟ್ರಧ್ವಜ ಕೆಳಗೆ ಭಗವಾಧ್ವಜ ಇದ್ದರೆ ತಪ್ಪೇನು?, ಭಗವದ್ಗೀತಾ ನಮ್ಮ ಆಧ್ಯಾತ್ಮಿಕ ಶೌರ್ಯದ ಸೆಲೆ. ಪ್ರತಿದಿನ ಶಾಖೆಯಲ್ಲಿ ನಾವು ಭಗವಧ್ವಜ ಹಾರಿಸುತ್ತೇವೆ. ಆಗಸ್ಟ್ 15, ಜನವರಿ 26 ರಂದು ಎಲ್ಲಾ ಸರ್ಕಾರಿ ಕಟ್ಟಡ, ನಮ್ಮ ಸಂಘಟನೆಗಳ ಮೇಲೆ ನಾವು ರಾಷ್ಟ್ರಧ್ವಜ ಹಾರಿಸುತ್ತೇವೆ ಎಂದರು.
ಭಗವಾಧ್ವಜ ಹೋರಾಟದ ಸಂಕೇತ:ಭಗವಾಧ್ವಜ ಇಲ್ಲದೇ ಇದ್ದರೆ ಮೊಗಲರ ವಿರುದ್ಧ ಹೋರಾಟ ಮಾಡಲು ಸಾಧ್ಯವಿರುತ್ತಿರಲಿಲ್ಲ. ನಮ್ಮ ದೇಶಕ್ಕೆ ದಾಳಿ ಮಾಡಿದವರ ವಿರುದ್ಧ ಹೋರಾಟ ಮಾಡಲು ಲಕ್ಷಾಂತರ ಜನರಿಗೆ ಸ್ಫೂರ್ತಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು ಮಾತ್ರ ಇತಿಹಾಸವಲ್ಲ.