ಬೆಂಗಳೂರು:ಬಿ.ವೈ. ವಿಜಯೇಂದ್ರ ರಾಜ್ಯ ಬಿಜೆಪಿಯ ನೂತನ ಸಾರಥಿಯಾಗಿ ಆಯ್ಕೆಯಾದ ಬೆನ್ನಲ್ಲೇ ಕಾಂಗ್ರೆಸ್ ಕುಟುಂಬ ರಾಜಕಾರಣದ ಬಗ್ಗೆ ವ್ಯಂಗ್ಯವಾಡಿದೆ. ಸಾಮಾಜಿಕ ಜಾಲತಾಣವಾದ 'ಎಕ್ಸ್' ಪೋಸ್ಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ''ಯಡಿಯೂರಪ್ಪನವರ ಮಗ ಎಂಬ ಅರ್ಹತೆಯಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ "ಯಡಿಯೂರಪ್ಪನವರ ಮಗ"ನಿಗೆ ಅಭಿನಂದನೆಗಳು. 'ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ' ಎಂಬ ಸುಳ್ಳನ್ನು ನಂಬಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇವೆ'' ಎಂದು ಕುಟುಕಿದೆ.
ಪ್ರಿಯಾಂಕ್ ಖರ್ಗೆ ವ್ಯಂಗ್ಯ:ವಿಜಯೇಂದ್ರ ರಾಜ್ಯಾಧ್ಯಕ್ಷನಾಗಿ ಆಯ್ಕೆಯಾಗಿರುವುದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕಾಲೆಳೆದಿದ್ದಾರೆ. ಬಿಜೆಪಿ ಕರ್ನಾಟಕಕ್ಕೆ ಅಭಿನಂದನೆಗಳು ಎಂದಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಕರ್ನಾಟಕ ಬಿಜೆಪಿ ನಾಯಕರ ಮೇಲೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಎಂದು ಟೀಕಿಸಿದ್ದಾರೆ.
ಹೆಚ್ಚಿನ ಬಿಜೆಪಿ ನಾಯಕರು ವಿಆರ್ಎಸ್ ಪಡೆಯುತ್ತಾರಾ? ಅಥವಾ ಸಾಮೂಹಿಕ ವಲಸೆ ಶುರುವಾಗುತ್ತಾ ಎಂದು ವ್ಯಂಗ್ಯವಾಡಿದ್ದಾರೆ. ಇದರ ಜೊತೆಗೆ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಅವರ ಕುಟುಂಬ ರಾಜಕಾರಣದ ವಿರುದ್ಧ ಮಾಡಿದ ಭಾಷಣದ ತುಣುಕನ್ನು ಟ್ಯಾಗ್ ಮಾಡಿದ್ದಾರೆ.
ರಮೇಶ್ ಬಾಬು ಟೀಕೆ:ಇತ್ತ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಅವರು, ''ಅಂತೂ ಇಂತೂ ಬಿಎಸ್ವೈಗೆ ಸಾಸ್ಟಾಅಂಗವಾಗಿ ಮಲಗಿದ ಬಿಜೆಪಿಗೆ ಕಾಂಗ್ರೆಸ್ ಪರವಾಗಿ ಶುಭಾಶಯಗಳು! ಕಟೀಲ್ ಬುರ್ಖಾ ಹಾಕಿ ಓಡಾಡುವುದು ತಪ್ಪಿತು! ಯತ್ನಾಳ್, ಬೊಮ್ಮಾಯಿ, ಸಿ ಟಿ ರವಿ, ಶೋಭಾ, ಅಶೋಕ ಆಸೆ ಬಿಟ್ಟು ಕಿರಿಯ ವಿಜಯೇಂದ್ರ ಹಿಂದೆ ಸುತ್ತುವಿಕೆ ಶುರು! ಕುಟುಂಬ ರಾಜಕಾರಣ ವಿರೋಧಿ ಸಿದ್ಧಾಂತದ ಬಿಜೆಪಿ ಈಗ ಅಬ್ಬೆಪಾರಿ'' ಎಂದು ಸಾಮಾಜಿಕ ಜಾಲತಾಣವಾದ 'ಎಕ್ಸ್' ಪೋಸ್ಟ್ನಲ್ಲಿ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ವ್ಯಕ್ತಿಗಿಂತ ಪಕ್ಷ ಮುಖ್ಯ, ಹೈಕಮಾಂಡ್ ನಿರ್ಧಾರಕ್ಕೆ ಸ್ವಾಗತ: ಆರ್. ಅಶೋಕ್