ಕರ್ನಾಟಕ

karnataka

ETV Bharat / state

ಪ್ರಧಾನಿ ಮೋದಿ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ - ಪ್ರಧಾನಿ ನರೇಂದ್ರ ಮೋದಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

bjp-state-president-by-vijayendra-met-pm-narendra-modi
ಮೋದಿ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

By ETV Bharat Karnataka Team

Published : Dec 22, 2023, 6:10 AM IST

ಬೆಂಗಳೂರು:ಸಂಘಟನಾತ್ಮಕ ಚಟುವಟಿಕೆಯ ಭಾಗವಾಗಿ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ತೆರಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಮೈತ್ರಿ ಪಕ್ಷ ಜೆಡಿಎಸ್ ವರಿಷ್ಠರು ಮೋದಿ ಅವರನ್ನು ಭೇಟಿಯಾದ ಬೆನ್ನಲ್ಲೇ ವಿಜಯೇಂದ್ರ ಭೇಟಿ ಮಾಡಿದ್ದು, ಮೈತ್ರಿ ನಂತರದ ಹಂತದ ಬೆಳವಣಿಗೆಗಳ ಭಾಗವಾಗಿದೆ ಎಂದು ತಿಳಿದುಬಂದಿದೆ.

'ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿಯಾಗಿ ಆಶೀರ್ವಾದ ಪಡೆದ ಸಂದರ್ಭ ಸಂತ ತೇಜಸ್ಸಿನ ಭಾರತಾಂಬೆಯ ಮಹಾನ್ ಸುಪುತ್ರನ ದರ್ಶನ ಪಡೆದ ಅನುಭವವಾಯಿತು. ರಾಷ್ಟ್ರ ಭಕ್ತಿ, ಸಂಘ ನಿಷ್ಠೆ, ಸಮರ್ಪಣೆ, ಶಿಸ್ತು, ಬದ್ಧತೆ, ಕ್ರಿಯಾಶೀಲತೆ, ಸಾಧಿಸುವ ಛಲದ ಗುರಿ ಇವೆಲ್ಲಕ್ಕೂ ಭಾರತದ ಇತಿಹಾಸದಲ್ಲಿ ಉದಾಹರಿಸಬಲ್ಲ ಏಕೈಕ ವ್ಯಕ್ತಿತ್ವ ಮೋದಿ ಅವರದು. ಅವರ ಸ್ವಾವಲಂಬಿ ಹಾಗೂ ಬಲಿಷ್ಠ ಭಾರತ ಕಟ್ಟುವ ಮಹಾನ್ ಸಂಕಲ್ಪ ಪರಿಪೂರ್ಣವಾಗಿ ಈಡೇರಿದರೆ ವಿಶ್ವಮಟ್ಟದಲ್ಲಿ ನಮ್ಮ ಭವ್ಯ ಭಾರತ ಅಗ್ರಸ್ಥಾನದಲ್ಲಿ ನಿಲ್ಲಲಿದೆ'.

'ಈ ನಿಟ್ಟಿನಲ್ಲಿ ಅವರೊಂದಿಗೆ ಹೆಗಲು ಕೊಡುವ ಪುಣ್ಯದ ಕಾರ್ಯದಲ್ಲಿ ಸಮರ್ಪಿಸಿಕೊಳ್ಳಲು ‘ಬಿಜೆಪಿ-ಕರ್ನಾಟಕ’ದ ರಥ ಮುನ್ನಡೆಸುವ ಜವಾಬ್ದಾರಿ ವಹಿಸಿಕೊಟ್ಟಿರುವುದು ನನ್ನ ಸೌಭಾಗ್ಯ ಎಂಬುದು ನನ್ನ ವಿನಮ್ರ ಭಾವವಾಗಿದೆ' ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ವಿಜಯೇಂದ್ರ ಬರೆದುಕೊಂಡಿದ್ದಾರೆ.

'2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಮೋದಿ ಅವರ ಮಡಿಲಿಗೆ ಸಮರ್ಪಿಸಬೇಕೆಂಬ ನನ್ನ ಹೆಗ್ಗುರಿಯ ಹೆಜ್ಜೆಗೆ ಇಂದಿನ ಭೇಟಿಯ ಅವರ ಪ್ರೇರಣೆಯ ಮಾತುಗಳು ನನ್ನಲ್ಲಿ ಅದಮ್ಯ ಆತ್ಮವಿಶ್ವಾಸ ಮೂಡಿಸಿದೆ' ಎಂದು ತಿಳಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ,ಕಾಂಗ್ರೆಸ್​ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇತ್ತೀಚೆಗೆ ದೆಹಲಿಯಲ್ಲಿ ಕಾಂಗ್ರೆಸ್​ ನೇತೃತ್ವದ ಇಂಡಿಯಾ ಮೈತ್ರಿಕೂಟದ ನಾಲ್ಕನೇ ಸಭೆ ನಡೆಯಿತು. ಈ ಸಭೆಯಲ್ಲಿ ಲೋಕಸಭೆ ಚುನಾವಣೆ ಟಿಕೆಟ್​ ಹಂಚಿಕೆ, ಪ್ರಚಾರ ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಸಭೆಯ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಧಾನಿ ಹುದ್ದೆಗೆ ಕೇಳಿಬಂದಿದೆ.

ಇನ್ನೊಂದೆಡೆ, ಜೆಡಿಎಸ್-ಬಿಜೆಪಿ ಜೊತೆ ಮೈತ್ರಿ ನಡೆಸಿದ್ದು, ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟುಗಳನ್ನು ಗೆಲ್ಲುವ ಯೋಜನೆಯನ್ನು ಹಾಕಿಕೊಂಡಿದೆ. ಇದರ ನಡುವೆ ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ಪ್ರಜ್ವಲ್​ ರೇವಣ್ಣ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ:ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಹೆಚ್.ಡಿ.ಕುಮಾರಸ್ವಾಮಿ

ABOUT THE AUTHOR

...view details