ಬೆಂಗಳೂರು:ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯಕ್ಕೆ ಆಗಮಿಸಿದ್ದು ಪಕ್ಷದ ಮುಖಂಡರ ಜೊತೆ ಬಿಜೆಪಿ ಕಚೇರಿಯಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಉಸ್ತುವಾರಿ ಪಿ.ಮುರಳೀಧರ ರಾವ್, ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಭಾಗಿಯಾಗಿದ್ದರು. ರಾಜ್ಯದಲ್ಲಿ ಪಕ್ಷದ ಸಂಘಟನೆ, ಸದಸ್ಯತ್ವ ಅಭಿಯಾನ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಅನರ್ಹ ಶಾಸಕರ ವಿಚಾರವೂ ಪ್ರಸ್ತಾಪವಾಗಿದೆ. ನಾಳೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆ ಏನಾಗುತ್ತೆ ಅಂತ ನೋಡೋಣ. ಬಳಿಕ ಟಿಕೆಟ್ ಬಗ್ಗೆ ನಿರ್ಧರಿಸೋಣ. ಕೋರ್ಟ್ ಅನರ್ಹರ ಪರ ತೀರ್ಪು ಕೊಡದಿದ್ದರೆ, ಮುಂದಿನ ಕ್ರಮದ ಬಗ್ಗೆ ಅಮಿತ್ ಶಾ ಜತೆ ಚರ್ಚಿಸುತ್ತೇನೆ ಎಂದು ನಡ್ಡಾ ತಿಳಿಸಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಉಪ ಚುನಾವಣೆಗೆ ಸಜ್ಜಾಗಲು ಕಟೀಲ್ಗೆ ಜೆ.ಪಿ ನಡ್ಡಾ ಸೂಚನೆ ನೀಡಿದ್ದಾರೆ. ಕಾರ್ಯಕರ್ತರ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕು. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ನೇಮಿಸಬೇಕು. ಯಾವುದೇ ಕಾರಣಕ್ಕೂ ಉಪ ಚುನಾವಣೆ ನಿರ್ಲಕ್ಷ್ಯ ಮಾಡಬೇಡಿ. ನೀವು ಅಧ್ಯಕ್ಷರಾದ ಬಳಿಕ ಮೊದಲ ಚುನಾವಣೆ ಇದಾಗಿದೆ ಎಂದು ಸಲಹೆ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ.