ಬೆಂಗಳೂರು: ಮುಂದಿನ ಚುನಾವಣೆ ಬಗ್ಗೆ ನಮ್ಮ ಸಿದ್ಧತೆ ನಡೆಯುತ್ತಿದೆ. ಮತ್ತೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತಿದ್ದೇವೆ. ಬಿಜೆಪಿ ಸಾಧನೆಗಳನ್ನು ಜನರ ಮುಂದಿಡಲು ನಿರ್ಧರಿಸಿದ್ದೇವೆ. ಪ್ರತಿ ಹಳ್ಳಿಗೆ ತೆರಳಿ ನಮ್ಮ ವಿಚಾರ ತಲುಪಿಸುತ್ತೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿನ ಸಭೆ ವಿಶೇಷವೇನಲ್ಲ. ಕಾಲ ಕಾಲಕ್ಕೆ ನಡೆಸುವಂತೆ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಲಾಗಿದೆ. ಕೇಂದ್ರದ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ನೇಮಕವನ್ನು ಸಭೆಯು ಒಕ್ಕೋರಲಿನಿಂದ ಸ್ವಾಗತಿಸಿದೆ. ಅವರ ನೇಮಕದಿಂದ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಕರ್ನಾಟಕದ ರಾಜಕೀಯದಲ್ಲಿ ಮಹತ್ತರವಾದ ಕಾರ್ಯ ನಿರ್ವಹಿಸಲು ಅವಕಾಶವಾಗಿದೆ ಎಂದರು.
ಸಂಚು ಮಾಡುವ ಪಕ್ಷ ಕಾಂಗ್ರೆಸ್:ಸಿಎಂ ಬದಲಾವಣೆ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಇದನ್ನು ಮಾಧ್ಯಮ ಕೇಳಬಾರದು, ಇದು ಸರಿಯಾದ ಪ್ರಶ್ನೆಯಲ್ಲ ಅಂತ ಅರುಣ್ ಸಿಂಗ್ ಗರಂ ಆದರು. ಮಾಧುಸ್ವಾಮಿ ಹೇಳಿಕೆ ವಿಚಾರಕ್ಕೆ ನೇರವಾಗಿ ಉತ್ತರಿಸದ ಅವರು, ಕಾಂಗ್ರೆಸ್ ಪಕ್ಷ ಸಂಚು ಮಾಡುವ ಪಕ್ಷ. ಇದು ಸತ್ಯವಾ? ಇಲ್ಲವಾ ಎಂಬುದನ್ನು ಪರಿಶೀಲಿಸಬೇಕು. ಕಾಂಗ್ರೆಸ್ ನಾಯಕರು ವಿನಾಃಕಾರಣ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಕಾಲ್ ರೆಕಾರ್ಡ್ ಮಾಡಿ ಈ ರೀತಿ ಹರಿಬಿಟ್ಟು ಮಿಸ್ ಲೀಡ್ ಮಾಡುತ್ತಿದ್ದಾರೆ ಎಂದರು.
ಪಕ್ಷ, ಸರ್ಕಾರದ ಬಗ್ಗೆ ನಕಾರಾತ್ಮಕವಾಗಿ ಯಾರೂ ಬಹಿರಂಗ ಮಾತಾಡಬಾರದು. ನಾಲ್ಕು ಗೋಡೆ ಒಳಗೂ ನಕಾರಾತ್ಮಕವಾಗಿ ಮಾತಾಡಬಾರದು ಅಂತ ಸೂಚಿಸಲಾಗಿದೆ. ಸಿಎಂ ಬೊಮ್ಮಾಯಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಬಡವರಿಗೆ, ರೈತರಿಗೆ ಉತ್ತಮ ಯೋಜನೆ ನೀಡಿದ್ದಾರೆ. ಯಾವುದೋ ಒಂದು ವಿಚಾರ ಇಟ್ಟುಕೊಂಡು ಕಾಂಗ್ರೆಸ್ನವರು ದೊಡ್ಡದು ಮಾಡುತ್ತಿದ್ದಾರೆ. ಅದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದರು.