ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕರನ್ನು ಬಿಜೆಪಿಗೆ ಕರೆದುಕೊಂಡು ಬಂದ ಕಾರಣಕ್ಕಾಗಿಯೇ ನಾವು ಇಂದು ಈ ಪರಿಸ್ಥಿತಿ ಎದುರಿಸಬೇಕಾಗಿ ಬಂದಿದೆ ಎನ್ನುವ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಹೇಳಿಕೆಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಳ್ಳಿಹಾಕಿದ್ದಾರೆ. ಅವರೆಲ್ಲಾ ಬಂದಿದ್ದರಿಂದಲೇ ಪಕ್ಷ ಅಧಿಕಾರಕ್ಕೆ ಬಂದಿತ್ತು, ನಾವು ಎಲ್ಲರೂ ಒಟ್ಟಾಗಿ ಹಾಲು ಜೇನಿನಂತೆ ಇದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರ ಹೇಳಿಕೆಯನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಲಿಲ್ಲ, ಈಶ್ವರಪ್ಪನವರು ಯಾವ ಹಿನ್ನೆಲೆಯಲ್ಲಿ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಹೊರಗಿನವರು, ಒಳಗಿನವರು ಅಂತ ನಮ್ಮ ನಡುವೆ ಭೇದಭಾವ ಇಲ್ಲ. ನಾವೆಲ್ಲರೂ ಒಟ್ಟಿಗೆ ಇದ್ದೇವೆ ಎಂದ ಅವರು, ಕಾಂಗ್ರೆಸ್ ಗಾಳಿ ಈಗ ನಮ್ಮಲ್ಲೂ ಬೀಸುತ್ತಿದೆ. ಅವರೆಲ್ಲಾ ಬಂದು ಪಕ್ಷದಲ್ಲಿ ಶಿಸ್ತು ಕಡಿಮೆ ಆಗಿದೆ. ಕಾಂಗ್ರೆಸ್ ನಾಯಕರನ್ನ ಕರೆದುಕೊಂಡು ಬಂದಿದ್ದರಿದಲೇ ನಾವು ಈಗ ಅನುಭವಿಸಬೇಕಾಗಿದೆ ಎಂದಿದ್ದ ಈಶ್ವರಪ್ಪನವರ ಅಭಿಪ್ರಾಯವನ್ನು ತಳ್ಳಿಹಾಕಿದರು.
ಗೊಂದಲಗಳು ಪಕ್ಷದಲ್ಲಿ ಇಲ್ಲ ಅಂತ ನಾನು ಹೇಳಲ್ಲ, ನಮ್ಮಲ್ಲಿ ಸಣ್ಣಪುಟ್ಟ ಗೊಂದಲಗಳಿವೆ. ಅದನ್ನೆಲ್ಲ ಸರಿಪಡಿಸಿಕೊಳ್ಳುತ್ತೇವೆ. ಗೊಂದಲಗಳನ್ನು ಸರಿಪಡಿಸಲು ನಮ್ಮ ನಾಯಕರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಹಾಗಾಗಿ ಬಹಿರಂಗ ಅಸಮಾಧಾನಕ್ಕೆ ಬಂಡಾಯದ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ಸಮಸ್ಯೆಗಳನ್ನು ಬಗೆಹರಿಸಿಕೊಂಡು ಒಟ್ಟಾಗಿ ಸೇರಿ ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತೇವೆ. ಮತ್ತೊಮ್ಮೆ ರಾಜ್ಯದಲ್ಲಿ ಹೊಸ ಶಕ್ತಿ, ಹೊಸ ಚೈತನ್ಯವನ್ನು ಕಾರ್ಯಕರ್ತರಲ್ಲಿ ತುಂಬುತ್ತೇವೆ. ಮತ್ತೆ ನಾವು ಗೆದ್ದೇ ಗೆಲ್ಲುತ್ತೇವೆ ಎಂದರು.