ಬೆಂಗಳೂರು: ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವಿನ ರೌಡಿ ಸಂಸ್ಕೃತಿ ಹೇಳಿಕೆ, ಪ್ರತಿ ಹೇಳಿಕೆ ಮುಂದುವರೆದಿದೆ. ಇದೀಗ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಲವು ಪ್ರಶ್ನೆಗಳನ್ನು ಕಾಂಗ್ರೆಸ್ ಮುಂದಿಟ್ಟಿದ್ದು, ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಿ ನಂತರ ರೌಡಿ ಕುರಿತ ಚರ್ಚೆ ನಡೆಸೋಣ ಎಂದು ಸವಾಲೆಸೆದಿದ್ದಾರೆ.
1. ದೇವರಾಜ್ ಅರಸು ಕಾಲದಲ್ಲಿ ಅವತ್ತಿನ ಭೂಗತ ರೌಡಿಗಳೊಂದಿಗೆ ಪವಿತ್ರ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂತುಕೊಂಡು ಪೊಲೀಸರಿಂದ ಎಳನೀರು ತರಿಸಿ ಕೊಡುತ್ತಿದ್ದವರು ಯಾವ ಪಕ್ಷದಲ್ಲಿದ್ದರು ಎಂದು ಹೇಳಬಹುದೇ ಸಿದ್ದರಾಮಯ್ಯ ಅವರೇ?
2. ಯಲಹಂಕದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರನ್ನು ಸೋಲಿಸಲು ಆಗುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿಯೊಬ್ಬ ಮನೆಯಲ್ಲೇ ಕುಳಿತು ಹತ್ಯೆಗೆ ಸಂಚು ರೂಪಿಸಿದ್ದ ಆಡಿಯೋ ಬಿಡುಗಡೆ ಆಗಿದ್ದರ ಬಗ್ಗೆ ಏನು ಹೇಳುತ್ತೀರಿ ಸಿದ್ದರಾಮಯ್ಯ ಅವರೇ?
3. ಯಾರೋ ಕೆಲವರು ಕಾಂಗ್ರೆಸ್ ಪಕ್ಷದ ಬ್ಯಾನರ್ ಹರಿದು ಹಾಕಿದಾಗ, ರಾಜ್ಯದಲ್ಲಿ ಬಿಜೆಪಿಯವರಿಗೆ ಒಂದೂ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಎಂದು ಬೀದಿ ರೌಡಿಯ ರೀತಿ ತಾವು ಆವಾಜ್ ಹಾಕಿದ್ದು ಯಾವ ಸಂಸ್ಕೃತಿ ಡಿ. ಕೆ ಶಿವಕುಮಾರ್ ಅವರೇ?
4. ಟಿಪ್ಪು ಕುರಿತು ನಿಮ್ಮ ಕುರುಡು ಪ್ರೇಮವನ್ನು ಖಂಡಿಸಿ ಕೊಡಗಿನ ಜನ ನಿಮ್ಮ ಕಾರಿಗೆ ಕಲ್ಲು ಹೊಡೆದಾಗ ಅದಕ್ಕೆ ಪ್ರತೀಕಾರವಾಗಿ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆ ಎಂದು ತಾವು ಹೇಳಿದ್ದು ರೌಡಿ ಸಂಸ್ಕೃತಿಯ ಲಕ್ಷಣ ಅಲ್ಲವೇ ಸಿದ್ದರಾಮಯ್ಯ ಅವರೇ?
5. ಕರ್ನಾಟಕ ಕಾಂಗ್ರೆಸ್ನ ಯುವ ಘಟಕದ ಈಗಿನ ಅಧ್ಯಕ್ಷರು ತಮ್ಮ ಗ್ಯಾಂಗ್ ಜತೆ ಸೇರಿಕೊಂಡು ಒಬ್ಬ ಪಾಪದ ಹುಡುಗನಿಗೆ ಹಿಗ್ಗಾ ಮುಗ್ಗಾ ಬಡಿದಿದ್ದನ್ನು ಇಡೀ ರಾಜ್ಯ ನೋಡಿರುವುದು ಸುಳ್ಳು ಎನ್ನುತ್ತೀರೇ ಡಿ. ಕೆ ಶಿವಕುಮಾರ್ ಅವರೇ?
6. ಪ್ರತಿಭಟನೆ ಮಾಡೋಕೆ ಬಂದರೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುತ್ತೇನೆ ಎಂದು ನಿಮ್ಮ ಪರಮಾಪ್ತ ಶಾಸಕ ರಮೇಶ್ ಕುಮಾರ್ ಹೇಳಿದ್ದು ತಾವು ಓದಿದ ಪ್ರಜಾಪ್ರಭುತ್ವದ ಯಾವ ಪುಸ್ತಕದ ಯಾವ ಹಾಳೆಯಲ್ಲಿದೆ ತಿಳಿಸಬಹುದೇ ಸಿದ್ದರಾಮಯ್ಯ ಅವರೇ?
7. ಅಖಿಲ ಭಾರತ ಕಾಂಗ್ರೆಸ್ ಘಟಕದ ಅಧ್ಯಕ್ಷರು ದೆಹಲಿಗೆ ಓಡಿಹೋಗಿ ಅವಿತುಕೊಳ್ಳುವುದಕ್ಕೂ ಮೊದಲು ಅದ್ಯಾವ ಸಾಮಾಜಿಕ ಸೇವೆಗಳಲ್ಲಿ ತೊಗಿಸಿಕೊಂಡಿದ್ದರು ಎನ್ನುವುದು ತಮಗೆ ತಿಳಿದಿಲ್ಲವೇ ಡಿ. ಕೆ ಶಿವಕುಮಾರ್ ಅವರೇ?
8. ಮಂಗಳೂರಿನ ನಟೋರಿಯಸ್ ಟಾರ್ಗೆಟ್ ಗ್ರೂಪ್ಪ ಕುಖ್ಯಾತ ರೌಡಿ ಇಲ್ಯಾಸ್, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯ ಅಷ್ಟೇ ಅಲ್ಲದೆ ಶಾಸಕ ಯು ಟಿ ಖಾದರ್ ಆಪ್ತ ಹೌದೋ ಅಲ್ಲವೋ ಉತ್ತರಿಸಬಹುದೇ ಸಿದ್ದರಾಮಯ್ಯ ಅವರೇ?