ಕರ್ನಾಟಕ

karnataka

ETV Bharat / state

'ಕನಕಪುರವನ್ನು ಬೆಂಗಳೂರಿಗೆ ಸೇರಿಸುವುದರ ಹಿಂದೆ ಡಿಕೆಶಿ ಕುಟುಂಬವನ್ನು ಶ್ರೀಮಂತಗೊಳಿಸುವ ಹುನ್ನಾರ'

ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಹಿಂದೆ ಡಿ.ಕೆ.ಶಿವಕುಮಾರ್ ಕುಟುಂಬವನ್ನು ಇನ್ನಷ್ಟು ಶ್ರೀಮಂತಗೊಳಿಸುವ ಹುನ್ನಾರವಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್

By ETV Bharat Karnataka Team

Published : Oct 24, 2023, 7:25 PM IST

Updated : Oct 24, 2023, 9:20 PM IST

ಬೆಂಗಳೂರು:ಡಿಸಿಎಂ ಡಿ.ಕೆ.ಶಿವಕುಮಾರ್ ಮೋಸ್ಟ್ ಸೆಲ್ಫಿಶ್ ಪೊಲಿಟಿಶಿಯನ್. ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಅವರ ಹೇಳಿಕೆಯ ಹಿಂದೆ ತಾಲೂಕಿನ ಅಭಿವೃದ್ಧಿ ಇಲ್ಲ, ಇದಕ್ಕೆ ಬದಲಾಗಿ ಅವರ ಕುಟುಂಬವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಚಿಂತನೆ ಇದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆರೋಪಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿಕೆ

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಹೇಳಿಕೆ ನೀಡಿದ್ದಾರೆ. ಅವರಿಗೆ ರಾಮನಗರ ಜಿಲ್ಲೆ ಉದ್ಧಾರ ಆಗೋದು ಇಷ್ಟ ಇಲ್ಲ‌. ರಾಮನಗರ ಜಿಲ್ಲೆಯನ್ನು ಹೇಗೆ ಕ್ಷೀಣ ಮಾಡಬಹುದು ಅಂತ ಯೋಚನೆ ಮಾಡುತ್ತಿದ್ದಾರೆ. ಕನಕಪುರ ಬೆಂಗಳೂರು ಗ್ರಾಮಾಂತರ ಅಷ್ಟೇ ಅಲ್ಲ. ನಗರಕ್ಕೆ ಸೇರಿಸಬೇಕು ಅನ್ನೋದು ಅವರ ಚಿಂತನೆ ಎಂದರು.

ಅಭಿವೃದ್ಧಿ ಮಾಡಬೇಕು ಅಂದರೆ ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿ. ಜಿಲ್ಲೆಗೆ ನಿಮ್ಮ ಕೊಡುಗೆ ಏನು?, ಕನಕಪುರ ತಾಲೂಕಿನ ಬಗ್ಗೆ ಯಾಕಿಷ್ಟು ಕಾಳಜಿ ಎಂದು ಪ್ರಶ್ನಿಸಿದರು. ಚಾಮರಾಜನಗರ ಜಿಲ್ಲೆಯಾಗಲು ನಮ್ಮ ಬಿಜೆಪಿ ಸರ್ಕಾರ ಕಾರಣ. ಬರ, ವಿದ್ಯುತ್ ಬಗ್ಗೆ ಯಾಕೆ ಯೋಚನೆ ಮಾಡುತ್ತಿಲ್ಲ. ಇಷ್ಟು ಸ್ವಾರ್ಥ ರಾಜಕಾರಣಿಯನ್ನು ನಾನು ನೋಡಿಲ್ಲ ಎಂದು ಟೀಕಿಸಿದರು.

ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಿ: ಕಲಬುರಗಿಯಲ್ಲಿ ಬಿಜೆಪಿಯ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ರವಿಕುಮಾರ್ ಒತ್ತಾಯಿಸಿದ್ದಾರೆ‌. ಈ ಸಂಬಂಧ ಅಧಿವೇಶನದಲ್ಲಿ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

ಅಕ್ಟೋಬರ್ 22ರಂದು ಕೇಂದ್ರ ಸಚಿವ ಭಗವಂತ ಖೂಬಾ, ನಾನು, ಸಂಸದ ಉಮೇಶ್ ಜಾದವ್, ಬೀದರ್ ಜಿಲ್ಲೆಯ ನಮ್ಮ ಶಾಸಕರು ಸೇರಿದಂತೆ 12 ಜನರ ನಿಯೋಗ ಕಲಬುರಗಿ ಜಿಲ್ಲೆಯಲ್ಲಿ ನಡೆದ ಎರಡು ಆತ್ಮಹತ್ಯೆ ಬಗ್ಗೆ ವರದಿ ತರಲು ಹೋಗಿದ್ದೆವು. ಒಂದು ಶಿವಕುಮಾರ್ ಪೂಜಾರ್ ಎಂಬ ಶಿರೋಳಿ ಗ್ರಾಮದವರದ್ದು, ಎರಡನೆಯದ್ದು ದೇವಾನಂದ್ ಚೌಹಾಣ್ ಅವರದ್ದು. ಶಿವಕುಮಾರ್ ಮನೆಯವರು ಈ ಆತ್ಮಹತ್ಯೆಗೆ ಶರಣ್ ಪ್ರಕಾಶ್ ಪಾಟೀಲ್ ಕಾರಣ ಅಂತ ಹೇಳುತ್ತಿದ್ದಾರೆ. ದೇವಾನಂದ್ ಆತ್ಮಹತ್ಯೆಗೆ ಶಿವರಾಜ್​ಗೌಡ ಕಾರಣ ಎಂದಿದ್ದಾರೆ. ಶಿವರಾಜ್ ಅವರ ನೆರವಿಗೆ ನಿಂತಿರುವುದು ಸಚಿವ ಪ್ರಿಯಾಂಕ್ ಖರ್ಗೆ‌. ಹಾಗಾಗಿ ಎರಡೂ ಆತ್ಮಹತ್ಯೆ ಪ್ರಕರಣಗಳನ್ನು ಸಿಬಿಐಗೆ ನೀಡುವಂತೆ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಹೇಳಿದ್ದೇನು?: ಒಂದಲ್ಲೊಂದು ದಿನ ಇಲ್ಲಿನ ಗ್ರಾಮಗಳು ಬೆಂಗಳೂರು ಆಗಿಯೇ ಆಗುತ್ತವೆ. ಪ್ರತಿ ಅಡಿ ಲೆಕ್ಕದಲ್ಲಿ ಬೆಲೆ ಕಟ್ಟಲಾಗುತ್ತದೆ. ನನ್ನ ಮಾತು ನೆನಪಿನಲ್ಲಿಟ್ಟುಕೊಳ್ಳಿ. ರಾಮನಗರ ಜಿಲ್ಲೆ ಮುಂದಿನ ದಿನಗಳಲ್ಲಿ ಬೆಂಗಳೂರು ಆಗುವುದರಲ್ಲಿ‌ ಯಾವುದೇ ಅನುಮಾನ ಬೇಡ ಎಂದು ಪರೋಕ್ಷವಾಗಿ ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವ ಹೇಳಿಕೆಯನ್ನು ಡಿ.ಕೆ. ಶಿವಕುಮಾರ್ ನೀಡಿದ್ದರು. ಶಿವನಹಳ್ಳಿ ಗ್ರಾಮ ಹೆದ್ದಾರಿಯ ಪಕ್ಕದಲ್ಲಿದೆ. ಯಾವುದೇ ಕಾರಣಕ್ಕೂ ಭೂಮಿಯನ್ನು ಬೆಂಗಳೂರಿಗರಿಗೆ ಮಾರಾಟ ಮಾಡಬೇಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದರು.

ಡಿಸಿಎಂ ಡಿ ಕೆ ಶಿವಕುಮಾರ್

ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮದ ವೀರಭದ್ರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಭೂಮಿ ಪೂಜೆ ಮತ್ತು ಶಿಲಾಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಕೆಎಂಎಫ್ ಡೈರಿ ಇದೆ, ಕನಕಪುರ ಪಟ್ಟಣವಾಗಿ ಇಲ್ಲಿಯತನಕ ಬೆಳೆದಿದೆ. ಆದ್ದರಿಂದ, ಎಲ್ಲರಲ್ಲೂ ಮನವಿ ಮಾಡುತ್ತೇನೆ, ಭೂಮಿ ಮಾರಾಟ ಮಾಡಬೇಡಿ. ಸಿಂಧ್ಯಾ ಅವರು ಇದನ್ನೇ ದಶಕಗಳಿಂದ ಹೇಳುತ್ತಾ ಬಂದಿದ್ದರು. ನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ. ನಿಮ್ಮ ಆಸ್ತಿ ಮೌಲ್ಯಗಳನ್ನು ಹತ್ತು ಪಟ್ಟು ಹೆಚ್ಚು ಮಾಡುವ ಶಕ್ತಿ ದೇವರು ನೀಡಿದ್ದಾನೆ. ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೆ ವಿದ್ಯೆ ನೀಡಬಹುದು ಅಷ್ಟೇ. ಕನಕಪುರದವರು ರಾಮನಗರ ಜಿಲ್ಲೆಯವರಲ್ಲ. ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದಿದ್ದರು.

ಇದನ್ನೂ ಓದಿ:ರಾಜ್ಯ ಸರ್ಕಾರವು ಬರ ಪರಿಹಾರ ಕೊಡದೇ ಕೇಂದ್ರದತ್ತ ಬೊಟ್ಟು ಮಾಡ್ತಿದೆ: ಎನ್​. ರವಿಕುಮಾರ್ ಕಿಡಿ

Last Updated : Oct 24, 2023, 9:20 PM IST

ABOUT THE AUTHOR

...view details