ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆ ಇಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮುಂದಿನ ಮೂರು ವರ್ಷಗಳ ಅವಧಿಗೆ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದರು.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಸಭೆ ನಡೆಯಿತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷ ಸಂಘಟನೆ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕುಮಾರ್, ಇಂದಿನ ಸಭೆಯಲ್ಲಿ ನಾಯಕತ್ವ ಬದಲಾವಣೆಯಂತಹ ಯಾವುದೇ ಚರ್ಚೆ ಆಗಿಲ್ಲ. ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ಸಂಪೂರ್ಣ ಸುಳ್ಳು. ಬಿ.ಎಲ್.ಸಂತೋಷ್ ಅವರು ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿವಾಸಕ್ಕೆ ಹೋಗಿ ಭೋಜನ ಸ್ವೀಕರಿಸಿ ಬಂದಿದ್ದಾರೆ. ನಾಯಕತ್ವ ಬದಲಾವಣೆ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಸತ್ಯಕ್ಕೆ ದೂರವಾದವು. ಪಕ್ಷ ಸಂಘಟನೆ ವಿಚಾರವಾಗಿ ಮಾತ್ರ ಚರ್ಚೆ ಮಾಡಿದ್ದೇವೆ. ಯಡಿಯೂರಪ್ಪ ಅವರೇ ಮುಂದಿನ ಮೂರು ವರ್ಷಕ್ಕೆ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.