ಬೆಂಗಳೂರು : ಕಾಂಗ್ರೆಸ್ ಪಕ್ಷಕ್ಕೆ ನೀಟ್ ವಿದ್ಯಾರ್ಥಿಗಳ ಮೇಲಿದ್ದ ಕಾಳಜಿ ಸಿಇಟಿ ವಿದ್ಯಾರ್ಥಿಗಳ ಮೇಲೆ ಏಕಿಲ್ಲ, ನೀಟ್ ಪರೀಕ್ಷೆ ಇದ್ದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್ ಶೋ ಯಾಕೆ ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ. ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಿಇಟಿ ಪರೀಕ್ಷೆ ಇದ್ದಾಗ ಪ್ರಮಾಣವಚನ ಸ್ವೀಕಾರ ಸಮಾರಂಭ ಆಯೋಜಿಸಿದ್ದು ಏಕೆ? ಎರಡು ದಿನ ಮುಂದೂಡಿಕೆ ಮಾಡಬಹುದಿತ್ತಲ್ಲ ಎಂದು ಮೋದಿ ರೋಡ್ ಶೋ ಟೀಕಿಸಿದ್ದ ಕೈ ನಾಯಕರಿಗೆ ಬಿಜೆಪಿ ಟಾಂಗ್ ಕೊಟ್ಟಿದೆ.
ನೀಟ್ ಪರೀಕ್ಷಾರ್ಥಿಗಳು ಮತ್ತು ಬೆಂಗಳೂರಿನ ಜನರ ವಿರೋಧವನ್ನು ಧಿಕ್ಕರಿಸಿ ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ ನಡೆಸಲಿರುವ ರೋಡ್ ಶೋ ಅತ್ಯಂತ ಬೇಜವಾಬ್ದಾರಿತನದ ನಡೆ. ಮೋದಿ ಅವರು ಪ್ರಚಾರ ಮಾಡಲಿ ನಮ್ಮ ತಕರಾರು ಇಲ್ಲ. ಆದರೆ, ವಿದ್ಯಾರ್ಥಿಗಳಿಗೆ ಆಗುವ ತೊಂದರೆಗೆ ಯಾರು ಹೊಣೆ? ಎಂದು ನಮ್ಮ ನಿಯೋಜಿತ ಸಿಎಂ ಈ ಟ್ವೀಟ್ ಮಾಡಿ ಹಲವು ದಿನಗಳು ಕಳೆದಿಲ್ಲ.
ನಾಳೆ ರಾಜ್ಯ ಮತ್ತು ಬೆಂಗಳೂರಿನಾದ್ಯಂತ ಸಿಇಟಿ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಿಮ್ಮ ಪ್ರಮಾಣ ವಚನ ಸ್ವೀಕಾರವನ್ನು ಒಂದು ಅಥವಾ ಎರಡು ದಿನ ಮುಂದೂಡಿದ್ದರೆ ಏನಾಗುತ್ತಿತ್ತು ಎಂದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಪ್ರಶ್ನಿಸಿದ್ದಾರೆ.
ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರೇ, ನಾಳೆ ರಾಜ್ಯಾದ್ಯಂತ ಸಿಇಟಿ ಪರೀಕ್ಷೆಗಳು ನಡೆಯುತ್ತವೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲಿದ್ದಾರೆ. ನಿಮ್ಮ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಿಂದ ಸಹಜವಾಗಿಯೇ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಅತೀವ ತೊಂದರೆಯಾಗಲಿದೆ. ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಮ್ಮ ಪ್ರಮಾಣ ವಚನ ಸ್ವೀಕರಿಸುವ ದಿನವನ್ನು ಮುಂದೂಡಬಹುದಲ್ಲವೇ..? ನೀಟ್ ಪರೀಕ್ಷಾರ್ಥಿಗಳ ಮೇಲಿದ್ದ ಕಾಳಜಿ ಸಿಇಟಿ ಪರೀಕ್ಷಾರ್ಥಿಗಳ ಮೇಲೆ ಏಕೆ ಇಲ್ಲ..? ಎಂದು ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಪ್ರಶ್ನಿಸಿದೆ.
8.30ರ ಹೊತ್ತಿಗೆ ಸಿಇಟಿ ಪರೀಕ್ಷಾ ಕೇಂದ್ರಗಳನ್ನು ತಲುಪಲು ಸೂಚನೆ : ಕಂಠೀರವ ಕ್ರೀಡಾಂಗಣದಲ್ಲಿ ನಾಳೆ (ಶನಿವಾರ) ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭ ನಿಗದಿ ಆಗಿರುವ ಹಿನ್ನೆಲೆಯಲ್ಲಿ, ಸುತ್ತಮುತ್ತಲಿನ ಕಾಲೇಜುಗಳಲ್ಲಿ ಸಿಇಟಿ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ, ಕಾರ್ಯಕ್ರಮ ನಡೆಯಲಿರುವ ಸ್ಥಳಕ್ಕೆ ಸಮೀಪದಲ್ಲಿ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವವರು ಬೆಳಗ್ಗೆ 8.30ರ ಹೊತ್ತಿಗೆ ಪರೀಕ್ಷಾ ಕೇಂದ್ರಗಳನ್ನು ತಲುಪಬೇಕು ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ತಿಳಿಸಿದ್ದಾರೆ.
ಇದನ್ನೂ ಓದಿ :ಸಿಎಂ ಪ್ರಮಾಣವಚನ ಹಿನ್ನೆಲೆ: ಬೆಳಗ್ಗೆ 8.30ಕ್ಕೆ ಆಗಮಿಸುವಂತೆ ಸಿಇಟಿ ವಿದ್ಯಾರ್ಥಿಗಳಿಗೆ ಮುನ್ಸೂಚನೆ..!