ಬೆಂಗಳೂರು: ಬಿಜೆಪಿ ರಾಷ್ಟ್ರಪತಿ ಸ್ಥಾನಕ್ಕೆ ಚುನಾಯಿಸುವ ವ್ಯಕ್ತಿಗಳು ರಬ್ಬರ್ ಸ್ಟ್ಯಾಂಪ್ ಎಂದು ಕಾಂಗ್ರೆಸ್ ಒರಟು ವಾದ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿರುವ ನಾಯಕರು ನಕಲಿ ಗಾಂಧಿ ಕುಟುಂಬದ ರಬ್ಬರ್ ಸ್ಟ್ಯಾಂಪ್ ಅಲ್ಲದೆ ಮತ್ತೇನು ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
ದೇಶದ ಮೇಲೆ ಇಂದಿರಾ ತುರ್ತುಪರಿಸ್ಥಿತಿ ಹೇರಿದಾಗ ಆಗಿನ ರಾಷ್ಟ್ರಪತಿಗಳು ವರ್ತಿಸಿದ ರೀತಿಯನ್ನು ಕಾಂಗ್ರೆಸ್ಸಿಗರು ಒಮ್ಮೆ ನೆನಪಿಸಿಕೊಳ್ಳಬೇಕು. ಯಾರು ಯಾರನ್ನು ರಬ್ಬರ್ ಸ್ಟ್ಯಾಂಪ್ ಮಾಡಿಕೊಂಡಿದ್ದರು ಎಂಬುದನ್ನು ಈ ಘಟನೆಯೊಂದರಿಂದಲೇ ತಿಳಿಯಬಹುದು. ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ನಕಲಿ ಗಾಂಧಿ ಕುಟುಂಬದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ನಿಷ್ಠಾವಂತರು. ಕಾಂಗ್ರೆಸ್ ಪಕ್ಷ ಅಂದು ಪ್ರತಿಭಾ ಪಾಟೀಲ್ ಅವರನ್ನು ರಬ್ಬರ್ ಸ್ಟ್ಯಾಂಪ್ ಮಾಡಿಕೊಂಡಿತ್ತೇ? ಎಂದು ನಕಲಿ ಗಾಂಧಿ ಸ್ಟ್ಯಾಂಪ್ ಹ್ಯಾಷ್ ಟ್ಯಾಗ್ ಬಳಸಿ ಬಿಜೆಪಿ ಟ್ವೀಟ್ ಮಾಡಿ ಟೀಕಿಸಿದೆ.
ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ಕಣಕ್ಕಿಳಿಸಿರುವುದನ್ನೇ ಟೀಕಿಸುತ್ತಿರುವ ಕಾಂಗ್ರೆಸ್ ಹಾಗೂ ಅದರ ಅಂಗಪಕ್ಷಗಳು ಬಯಲಿನಲ್ಲಿ ಬಚ್ಚಿಟ್ಟುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಒಬ್ಬ ಬುಡಕಟ್ಟು ಸಮುದಾಯದ ಮಹಿಳೆ ರಾಷ್ಟ್ರದ ಅತ್ಯುನ್ನತ ಸ್ಥಾನಕ್ಕೆ ಏರುವುದನ್ನು ಕಾಂಗ್ರೆಸ್ ಪಕ್ಷಕ್ಕೇಕೆ ಸಹಿಸಲಾಗುತ್ತಿಲ್ಲ?. ದೇಶದ ಅತ್ಯುನ್ನತ ಪದವಿಗೆ ಏರುತ್ತಿರುವ ಮೊದಲ ಆದಿವಾಸಿ ಮಹಿಳೆಯಾಗಿ ದ್ರೌಪದಿ ಮುರ್ಮು ಅವರು ಗುರುತಿಸಿಕೊಳ್ಳಲಿದ್ದಾರೆ. ಬಿಜೆಪಿ ವಿರುದ್ಧ ಯೋಜಿತ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ಹಾಗೂ ಎಡಪಂಥೀಯ ಬುದ್ಧಿಜೀವಿಗಳಿಗೆ ಈಗ ಅಸ್ತಿತ್ವದ ಚಿಂತೆ ಮೂಡುತ್ತಿದೆ ಎಂದು ಬಿಜೆಪಿ ಗೇಲಿ ಮಾಡಿದೆ.