ಬೆಂಗಳೂರು: ರಾಷ್ಟ್ರೀಯ ಪಕ್ಷವೊಂದರ ಜಗತ್ತಿನ ಅತ್ಯಂತ ಶ್ರೀಮಂತ ಮಹಿಳಾ ಅಧ್ಯಕ್ಷೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆ ಪಡೆಯಲು ಇಂದೇ ಅರ್ಜಿ ಸಲ್ಲಿಸಿ. ಭ್ರಷ್ಟಾಧ್ಯಕ್ಷರೇ, ನಿಮಗೂ ಸ್ವಂತ ಮನೆಯ ಇದೆಯೋ ಇಲ್ಲವೋ ಎಂಬುದನ್ನು ಜನತೆಗೆ ತಿಳಿಸುವಿರಾ ಎಂದು ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ವ್ಯಂಗ್ಯವಾಡಿ ಟ್ವೀಟ್ ಮಾಡಿದೆ.
ಸೋನಿಯಾ ಗಾಂಧಿ ಕುಟುಂಬಕ್ಕೆ ಸ್ವಂತ ಮನೆ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆ ಉಲ್ಲೇಖಿಸಿ ಕರ್ನಾಟಕ ಬಿಜೆಪಿ ಟ್ವಿಟ್ಟರ್ ಖಾತೆಯಲ್ಲಿ ಈ ರೀತಿ ಬರೆಯಲಾಗಿದೆ. ಅಲ್ಲದೇ, ರಾಹುಲ್ ಗಾಂಧಿ ಅವರ ವಿಡಿಯೋವೊಂದು ಶೇರ್ ಮಾಡಿ ನ್ಯಾಷನಲ್ ಹೆರಾಲ್ಡ್ ರಾಹುಲ್ ಗಾಂಧಿ ಪಾಲಿನ ಸೋನಾ ಮಷಿನ್ ಈ ಕಡೆಯಿಂದ 50 ಲಕ್ಷ ಹಾಕು, ಆ ಕಡೆಯಿಂದ 2,000 ಕೋಟಿ ಲಪಟಾಯಿಸು ಎಂದು ಮತ್ತೊಂದು ಟ್ವೀಟ್ ಮಾಡಲಾಗಿದೆ.
ಇಷ್ಟೇ ಅಲ್ಲ, ಭ್ರಷ್ಟರು, ಭ್ರಷ್ಟರಿಂದ, ಭ್ರಷ್ಟರ ರಕ್ಷಣೆಗಾಗಿ...ಇದು ಕೆಪಿಸಿಸಿಯ ಹೊಸ ನೀತಿ ಎಂದು ಇನ್ನೊಂದು ಟ್ವೀಟ್ ಮಾಡಿ, ರಾಹುಲ್ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸುವ ಮೂಲಕ ಕಾನೂನು-ಸುವ್ಯವಸ್ಥೆಗೆ ಧಕ್ಕೆ ತರುತ್ತಿದೆ. ನಕಲಿ ಗಾಂಧಿ ಕುಟುಂಬವನ್ನು ಸಂವಿಧಾನ ಹಾಗೂ ದಂಡ ಸಂಹಿತೆಗೆ ಅತೀತರನ್ನಾಗಿಸಲು ಕಾಂಗ್ರೆಸ್ ಹೊರಟಿದೆ. ಇದು ಈ ದೇಶದ ಸಂವಿಧಾನ ಮತ್ತು ಕಾನೂನಿಗೆ ಮಾಡುತ್ತಿರುವ ಅವಮಾನವಲ್ಲವೇ? ಪ್ರಶ್ನಿಸಲಾಗಿದೆ.