ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯ ಸ್ಥಿರ ಸರ್ಕಾರವಿದ್ದು, ಸ್ಥಿರ ನಿರ್ಧಾರಗಳನ್ನೇ ಕೈಗೊಳ್ಳುತ್ತಿದೆ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡು ಬಿಜೆಪಿ ಸರಣಿ ಟ್ವೀಟ್ ಮೂಲಕ ಅಸಮರ್ಥ ಸರ್ಕಾರ, ಬಿಜೆಪಿಗೆ ಅಧಿಕಾರ ಏಕೆ ಎಂದು ಪ್ರಶ್ನೆ ಎತ್ತಿರುವ ಕಾಂಗ್ರೆಸ್ಗೆ ತಿರುಗೇಟು ನೀಡಿದೆ.
ಸುವರ್ಣ ಕರ್ನಾಟಕ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ದೃಢ ಹೆಜ್ಜೆ ಇಡುತ್ತಿದೆ. 75 ನೇ ಸ್ವಾತಂತ್ರ್ಯದ ಸಂದರ್ಭದಲ್ಲಿ ಸರ್ಕಾರ ಘೋಷಿಸಿರುವ ಅಮೃತ ಯೋಜನೆಗಳ ಸರಣಿ ಜನರ ಬದುಕನ್ನು ಹಸನಾಗಿಸಲಿದೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಮಾನವೀಯ ಸ್ಪರ್ಶ ಅಗತ್ಯ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರಂಭದಿಂದಲೇ ಈ ದಿಶೆಯಲ್ಲಿ ಹೆಜ್ಜೆ ಇಟ್ಟಿದ್ದಾರೆ. ರೈತರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹಕ್ಕಾಗಿ 1,000 ಕೋಟಿ ರೂ. ಮೀಸಲಿಟ್ಟಿದ್ದಾರೆ. ಮಣ್ಣಿನ ಮಕ್ಕಳ ಉನ್ನತ ಶಿಕ್ಷಣಕ್ಕೆ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ವೀರ ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಬ್ರಿಟಿಷರ ವಿರುದ್ಧ ಬಿಚ್ಚುಗತ್ತಿ ಹಿಡಿದು ನಿಂತು ಹೋರಾಟ ನಡೆಸಿದ ರಾಯಣ್ಣನ ತ್ಯಾಗ ಅನನ್ಯ. ಸ್ವಾತಂತ್ರ್ಯೋತ್ಸವದ ದಿನ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆಗೆ ನಿರ್ಧರಿಸುವ ಈ ಮೂಲಕ ರಾಯಣ್ಣನ ನಿತ್ಯ ಸ್ಮರಣೆಗೆ ನಮ್ಮ ಸರ್ಕಾರ ಅವಕಾಶ ಕಲ್ಪಿಸಿದೆ. ಅಂಗಾಂಗ ದಾನ ಎಂಬುದು ಅಮೂಲ್ಯ ಜೀವ ಉಳಿಸುವ ಆದರಣೀಯ ನಿರ್ಧಾರ. ಪಂಚ ಭೂತಾತ್ಮಕವಾದ ದೇಹ ಪಂಚಭೂತಗಳಲ್ಲಿ ಲೀನವಾಗುವುದರ ಬದಲು ಇನ್ನೊಂದು ದೇಹಕ್ಕೆ ಜೀವ ನೀಡಲು ಸಾಧ್ಯ. ಈ ದಿಶೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇಹದ ಅಂಗಾಂಗ ದಾನಕ್ಕೆ ಸಹಿ ಹಾಕುವ ಮೂಲಕ ಸಮಾಜಕ್ಕೆ ಮೇಲ್ಪಂಕ್ತಿ ಹಾಕಿದ್ದಾರೆ ಎಂದು ಕಾಂಗ್ರೆಸ್ಸಿಗರ ವಿರುದ್ಧ ಬಿಜೆಪಿ ಕಿಡಿಕಾರಿದೆ.