ಬೆಂಗಳೂರು: ಮಾಧ್ಯಮದಲ್ಲಿ ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧವಾಗಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪಕ್ಷ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹೆಚ್ ವಿಶ್ವನಾಥ್ ಬಿಜೆಪಿ ಕಾರ್ಯಾಲಯಕ್ಕೆ ಬಂದು ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ಆಗುವ ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ. ಬಿಜೆಪಿಯ ರೀತಿ ನೀತಿ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಇದು ಅವರ ವ್ಯಕ್ತಿಗತ ಹೇಳಿಕೆ ಅಷ್ಟೇ. ಅವರು ಬಿಎಸ್ವೈ ಬಗ್ಗೆ ಕೊಟ್ಟಿರುವ ಹೇಳಿಕೆಯನ್ನು ಸಾರಾಸಗಟಾಗಿ ಪಕ್ಷ ತಿರಸ್ಕರಿಸುತ್ತದೆ ಎಂದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿಕುಮಾರ್ ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಕಟೀಲ್ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಗಮನಕ್ಕೆ ತರಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲು ಅರುಣ್ ಸಿಂಗ್ ಅವರಲ್ಲಿ ವಿನಂತಿ ಮಾಡುತ್ತೇನೆ ಎಂದರು. ಫೋನ್ ಟ್ಯಾಪ್ ಬಗ್ಗೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ. ಪಕ್ಷದ ವಿರುದ್ಧ, ಸರ್ಕಾರದ ವಿರುದ್ಧದ ಹೇಳಿಕೆ ಸಂಬಂಧ ಕೇಂದ್ರದ ಗಮನಕ್ಕೆ ತರುತ್ತೇವೆ. ಯಾರೂ ಕೂಡಾ ಬಹಿರಂಗ ಹೇಳಿಕೆ ಕೊಡಬಾರದು ಎಂದು ಅರುಣ್ ಸಿಂಗ್ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಸಚಿವರ ಸಭೆಯೂ ಉತ್ತಮವಾಗಿ ನಡೆದಿದೆ. ಯಾರ ಫೋನ್ ಟ್ಯಾಪ್ ಮಾಡುವ ಪ್ರಶ್ನೆ ಉದ್ಭವಿಸುದಿಲ್ಲ. ಈ ಬಗ್ಗೆ ಆರೋಪ ಮಾಡಿರುವ ಅರವಿಂದ್ ಬೆಲ್ಲದ್ ಅವರನ್ನು ಕರೆದು ಮಾತನಾಡುತ್ತೇವೆ. ಆರೋಪಕ್ಕೆ ಸಾಕ್ಷಿ ಕೊಡಲಿ. ಸರ್ಕಾರ ಇಂತಹ ಕೆಲಸ ಮಾಡಲ್ಲ. ಶಾಸಕರು, ಸಚಿವರ ಬಗ್ಗೆ ಸರ್ಕಾರ ಭರವಸೆ ಇಟ್ಟುಕೊಂಡಿದೆ ಎಂದರು.