ಬೆಂಗಳೂರು: ನನ್ನ ತೇಜೋವಧೆ ಮಾಡಲು ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಇಂಥ ಪುಸ್ತಕಗಳನ್ನು ಹೊರತರುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಶಿವಾನಂದ ವೃತ್ತ ಸಮೀಪದ ಸರ್ಕಾರಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪು ಹಾಗೂ ನನ್ನ ಬಗೆಗಿನ ಪುಸ್ತಕ ಬಿಡುಗಡೆ ವಿಚಾರ ನನಗೆ ತಿಳಿದಿಲ್ಲ. ಕಾಮಾಲೆ ರೋಗದವರಿಗೆ ಎಲ್ಲವೂ ಹಳದಿಯಾಗಿ ಕಾಣಿಸುತ್ತದೆ. ಟಿಪ್ಪು ಥರ ಖಡ್ಗ ಹಿಡಿದು ಡ್ರೆಸ್ ಹಾಕಿಕೊಂಡವರು ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ. ಟಿಪ್ಪು ಬಗೆಗಿನ ಶೇಖ್ ಅಲಿ ಪುಸ್ತಕ ಬರೆದಾಗ ಮುನ್ನುಡಿ ಬರೆದವರು ಯಾರು? ಇದು ಇಬ್ಬಂದಿತನ ಅಲ್ವಾ? ಎಂದು ಕೇಳಿದರು.
ಚುನಾವಣೆ ಸಮೀಸುತ್ತಿರುವಾಗ ಇಂಥ ಪುಸ್ತಕ ಹೊರತರುತ್ತಿರುವುದು ಮಾನನಷ್ಟದ ಉದ್ದೇಶ ಹೊಂದಿದೆ. ಕಾನೂನು ಪ್ರಕಾರ ಏನು ಮಾಡೋಕೆ ಆಗುತ್ತೆ ನೋಡೋಣ ಎಂದರು. ಇಂದಿನ ಕೋಲಾರ ಪ್ರವಾಸ ಕುರಿತು ಚುಟುಕಾಗಿ ಉತ್ತರಿಸಿದ ಸಿದ್ದರಾಮಯ್ಯ, ಹೌದು, ಕೋಲಾರಕ್ಕೆ ಹೋಗುತ್ತಿದ್ದೇನೆ ಎಂದರು.
ಬಿಜೆಪಿ ಪುಸ್ತಕಕ್ಕೆ ಸಿದ್ದರಾಮಯ್ಯ ಕೌಂಟರ್:ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೂ ಮುನ್ನ ಸಿದ್ದರಾಮಯ್ಯ ಸರಣಿ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಸರ್ಕಾರದ ಅವಧಿಯ ಸಾಧನೆಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. ಇದರಲ್ಲಿ ತಮ್ಮ ಸರ್ಕಾರದ ಸಾಧನೆಯನ್ನು ರಾಜ್ಯ ಬಿಜೆಪಿ ಪೋಸ್ಟರ್ ಮೂಲಕ ಬಿಡುಗಡೆ ಮಾಡಿದಂತೆ ಚಿತ್ರಿಸಲಾಗಿದೆ.