ಬೆಂಗಳೂರು: ಮೈತ್ರಿ ಉಳಿಸಿಕೊಳ್ಳಲು ಸ್ಟಾಲಿನ್ ಕಟ್ಟಪ್ಪಣೆ ಮೇರೆಗೆ ಕಾವೇರಿ ನೀರು ಹರಿಸಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಕಾಣೆಯಾಗಿದ್ದಾರೆ. ಇವರನ್ನು ಹುಡುಕಿಕೊಟ್ಟವರಿಗೆ ಐದು ಗ್ಯಾರಂಟಿಗಳು ಉಚಿತ ಖಚಿತ ನಿಶ್ಚಿತ ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್ ಪ್ರಕಟಿಸಿ ವ್ಯಂಗ್ಯವಾಡಿದೆ.
ಡಿಯರ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ 'ದೊಡ್ಡಮಟ್ಟದಲ್ಲಿ ಸಹಕರಿಸಿದ' ಋಣ ತೀರಿಸಲು ಹಾಗೂ ಲೋಕಸಭಾ ಚುನಾವಣೆಯ ಬಳಿಕ ಸಿಎಂ ಕುರ್ಚಿಗೆ ಲಾಬಿ ಮಾಡಲು, ಕಾವೇರಿಯನ್ನು ಸ್ಟಾಲಿನ್ ನಾಡಿಗೆ ಬೇಕಾಬಿಟ್ಟಿಯಾಗಿ ಹರಿಬಿಟ್ಟು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ನಾಪತ್ತೆಯಾಗಿದ್ದಾರೆ. ದಯವಿಟ್ಟು ಹುಡುಕಿಕೊಡಿ. ಹುಡುಕಿಕೊಟ್ಟವರಿಗೆ ಐದು ಗ್ಯಾರಂಟಿಗಳು ಉಚಿತ ಖಚಿತ ನಿಶ್ಚಿತ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಾವ ಪುರುಷಾರ್ಥದ ಸಾಧನೆಗೆ ಕಾಂಗ್ರೆಸ್ ರದ್ದುಗೊಳಿಸಿದೆ:ಭಾರತದಲ್ಲಿ ರಾಷ್ಟ್ರೀಯತೆ ಜಾಗೃತಗೊಂಡರೆ, ತನ್ನ ಅಸ್ತಿತ್ವ ಕಮರಿ ಹೋಗುತ್ತದೆ ಎಂಬುದು ಬ್ರಿಟಿಷರ ಸಂಜಾತರಾಗಿರುವ ಎಐಸಿಸಿ ಮನಸ್ಥಿತಿ. ಹೀಗಾಗಿ ಅಧಿಕಾರ ದೊರೆತಾಗ ಮತ್ತು ಅವಕಾಶ ಸಿಕ್ಕಾಗ ರಾಷ್ಟ್ರೀಯತೆ ಹಾಗೂ ರಾಷ್ಟ್ರೀಯತೆಯ ಅಂಶಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಹತ್ತಿಕ್ಕುತ್ತಲೇ ಬಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಿದ್ದು, ರಾಷ್ಟ್ರೀಯತೆಯನ್ನು ಒಳಗೊಂಡ ಪಠ್ಯಪುಸ್ತಕವನ್ನು ಹಿಂಪಡೆದಿದ್ದು, ಇದೆಲ್ಲಾ ರಾಜ್ಯ ಕಾಂಗ್ರೆಸ್ ರಾಷ್ಟ್ರ ವಿರೋಧಿ ಧೋರಣೆಯ ಪ್ರತೀಕ ಎಂದು ಎಕ್ಸ್ ಮೂಲಕ ಬಿಜೆಪಿ ಆರೋಪಿಸಿದೆ.
ಇದನ್ನೂ ಓದಿ: 19 ಜಿಲ್ಲಾಸ್ಪತ್ರೆಗಳಲ್ಲಿ AI ಆಧಾರಿತ ಶ್ವಾಸಕೋಶ ಕ್ಯಾನ್ಸರ್ ಸ್ಕ್ರೀನಿಂಗ್ ತಂತ್ರಜ್ಞಾನ: ಸಚಿವ ದಿನೇಶ್ ಗುಂಡೂರಾವ್
ಅತ್ಯಂತ ವೇಗವಾಗಿ ಸಾಗುತ್ತಿರುವ ಜಗತ್ತಿನಲ್ಲಿ, ಭಾರತೀಯರನ್ನು ಸ್ಪರ್ಧಾತ್ಮಕ ಜಗತ್ತಿಗೆ ಅನುವುಗೊಳಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಅತ್ಯಗತ್ಯ. ಇದನ್ನು ಮನಗಂಡಿದ್ದ ಬಿಜೆಪಿ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸೇರಿದಂತೆ ಶಿಕ್ಷಣ ವಲಯವನ್ನು ಸುಧಾರಿಸುವ ಅನೇಕ ಸುಧಾರಣಾ ಕ್ರಮಗಳನ್ನು ಕರ್ನಾಟಕದಲ್ಲಿ ಜಾರಿಗೆ ತಂದಿತ್ತು. ನೂತನ ಪಠ್ಯಕ್ರಮ, ವಿಭಿನ್ನ ಬೋಧನಾ ಶೈಲಿ, ಮಾತೃಭಾಷೆ ಹಾಗೂ ಸ್ಥಳೀಯ ಭಾಷೆಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಿಕೆ, ವಿಜ್ಞಾನ ಮತ್ತು ಕಲೆಯ ವಿಷಯಗಳು ಹಾಗೂ ವೃತ್ತಿಪರ ಮತ್ತು ಶೈಕ್ಷಣಿಕ ಕೋರ್ಸ್‌ಗಳ ಮೂಲಕ ಉದ್ಯೋಗಾಧಾರಿತ ಕೌಶಲ್ಯಗಳ ಜೊತೆಜೊತೆಗೆ ರಾಷ್ಟೀಯತೆಯ ಚಿಂತನೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ಒಳಗೊಂಡಿದೆ.
ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಭಾರತದ ಶಿಕ್ಷಣ ಜಗತ್ತಿಗೆ ಯಾವುದೇ ಕೊಡುಗೆಯನ್ನು ನೀಡದೆ, ಮೆಕಾಲೆ ಶಿಕ್ಷಣ ಪದ್ದತಿಯನ್ನೇ ಯಥಾವತ್ತಾಗಿ ಮುಂದುವರಿಸಿದೆ. ಶಿಕ್ಷಣವನ್ನು ರಾಷ್ಟ್ರ ನಿರ್ಮಾಣಕ್ಕೆ, ಯುವಜನತೆಗೆ ಸ್ವಾವಲಂಬನೆಯ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡಲು, ಆತ್ಮವಿಶ್ವಾಸವನ್ನು ವೃದ್ಧಿಸಲು ಬಿಜೆಪಿ ಬಳಸಿದರೆ, ಅದೇ ಕಾಂಗ್ರೆಸ್ ಶಿಕ್ಷಣವನ್ನು ತನ್ನ ಪೊಳ್ಳು ಸಿದ್ಧಾಂತ ಹಾಗೂ ತನ್ನ ದೇಶ ವಿರೋಧಿ ಮನಸ್ಥಿತಿಯನ್ನು ತುಂಬುವ ಟೂಲ್ ಕಿಟ್ ಆಗಿ ಬಳಸಿಕೊಳ್ಳುತ್ತದೆ ಎಂದು ಬಿಜೆಪಿ ದೂರಿದೆ.
ಕಾಂಗ್ರೆಸ್ ತನ್ನ ತಿರುಚಿದ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ತೂರಿಸಿ, ಮಕ್ಕಳ ಹಾಗೂ ಯುವಕರ ಬ್ರೈನ್ ವಾಶ್ ಮಾಡುವ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ. ಇದಕ್ಕಾಗಿ ತನ್ನ ವಂಧಿಮಾಗದರನ್ನು, ಆಸ್ಥಾನ ಕಲಾವಿದರನ್ನೆಲ್ಲಾ ಗುಡ್ಡೆ ಹಾಕಿ, ತನ್ನ ಸಿದ್ಧಾಂತಕ್ಕೆ ಅನುಕೂಲವಾಗುವ ರೀತಿಯಲ್ಲಿ ಪಠ್ಯ ಪರಿಷ್ಕರಣೆ ಮಾಡಿತ್ತು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೆ, ತಾನು ಮಾಡುವ ಕಿತಾಪತಿಗಳಿಗೆ ಜಾಗ ಇರುವುದಿಲ್ಲ ಎಂಬುದೇ ಕಾಂಗ್ರೆಸ್‌ಗಿದ್ದ ಪ್ರಮುಖ ಅಸಮಾಧಾನ. ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಕಾಂಗ್ರೆಸ್ ಯಾವುದೇ ಪ್ರಮುಖ ನೀತಿಯನ್ನು ಇದುವರೆಗೆ ಜಾರಿಗೆ ತಂದಿಲ್ಲ. ಈ ಹಿಂದೆ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯಿದೆಯಿಂದ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಯಿತೇ ವಿನಹ ಶೈಕ್ಷಣಿಕ ಕ್ಷೇತ್ರಕ್ಕಾದ ಪ್ರಯೋಜನ ಶೂನ್ಯ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳನ್ನು ರದ್ದುಪಡಿಸಬೇಕು ಹಾಗೂ ದ್ವೇಷ ರಾಜಕಾರಣ ಮಾಡಬೇಕು ಎಂಬ ಟೂಲ್ ಕಿಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸುತ್ತಿರುವುದು ಸಹ ದ್ವೇಷದ ರಾಜಕಾರಣಕ್ಕಾಗಿ. ಕರ್ನಾಟಕದ ಎಲ್ಲಾ 30 ವಿಶ್ವವಿದ್ಯಾಲಯದ ಕುಲಪತಿಗಳು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸದೆ ಮುಂದುವರೆಸಿ ಎಂದು ಆಗ್ರಹಿಸಿದರೂ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಾವ ಪುರುಷಾರ್ಥದ ಸಾಧನೆಗೆ ಕಾಂಗ್ರೆಸ್ ರದ್ದುಗೊಳಿಸಿದೆ ಎಂಬ ಪ್ರಶ್ನೆಗೆ ಇದುವರೆಗೂ ಸ್ಪಷ್ಟ ಉತ್ತರ ನೀಡಿಲ್ಲ ಎಂದು ಕುಟುಕಿದೆ.
ಇದನ್ನೂ ಓದಿ: ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಚಿಂದಿ ಆಯುವವರ ಮಕ್ಕಳಿಗೆ ಅವಕಾಶ: ಸಫಾಯಿ ಕರ್ಮಚಾರಿ ಮೀಸಲಿನಡಿ ಪ್ರವೇಶ