ಬೆಂಗಳೂರು:ನವೆಂಬರ್ 3ರಂದು ನಡೆಯಲಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಾಗಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಈ ಮೂಲಕ ಟಿಕೆಟ್ ಗೊಂದಲಕ್ಕೆ ತೆರೆ ಬಿದ್ದಿದೆ.
ಕಳೆದ ಕೆಲ ದಿನಗಳಿಂದ ಕಮಲ ಅಭ್ಯರ್ಥಿಗಳ ಕುರಿತಾಗಿದ್ದ ಸಸ್ಪೆನ್ಸ್ಗೆ ಈ ಮೂಲಕ ತೆರೆಬಿದ್ದಿದೆ. ಆರ್.ಆರ್. ನಗರ ಹಾಗೂ ಶಿರಾ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಹೈ ಕಮಾಂಡ್ ಫೈನಲ್ ಮಾಡಿದೆ. ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ರಾಜರಾಜೇಶ್ವರಿ ಕ್ಷೇತ್ರಕ್ಕೆ ಮುನಿರತ್ನ ಹೆಸರನ್ನು ಅಂತಿಮಗೊಳಿಸಿದ್ದು, ಶಿರಾ ಕ್ಷೇತ್ರಕ್ಕೆ ರಾಜೇಶ್ ಗೌಡಗೆ ಟಿಕೆಟ್ ನೀಡಿದೆ.
ಸುಪ್ರೀಂ ಕೋರ್ಟ್ ಇಂದು ತುಳಸಿ ಮುನಿರಾಜ್ ಅರ್ಜಿಯನ್ನು ವಜಾ ಮಾಡಿ ತೀರ್ಪು ನೀಡಿತ್ತು. ಆ ಮೂಲಕ ಮುನಿರತ್ನಗಿದ್ದ ವಿಘ್ನ ನಿವಾರಣೆಯಾಗಿದೆ. ಇದೀಗ ಬಿಜೆಪಿ ಹೈಕಮಾಂಡ್ ಆರ್.ಆರ್. ನಗರಕ್ಕೆ ಮುನಿರತ್ನಗೆ ಟಿಕೆಟ್ ಘೋಷಿಸಿದೆ. ಶಿರಾ ಕ್ಷೇತ್ರಕ್ಕೆ ಇತ್ತೀಚೆಗೆ ಬಿಜೆಪಿ ಸೇರಿದ್ದ ರಾಜೇಶ್ ಗೌಡಗೆ ಟಿಕೆಟ್ ನೀಡಲಾಗಿದೆ. ಟಿಕೆಟ್ ಘೋಷಣೆ ವಿಳಂಬವಾಗಿದ್ದರಿಂದ ಮುನಿರತ್ನಗೆ ಆತಂಕ ಹೆಚ್ಚಾಗಿತ್ತು. ಈ ಸಂಬಂಧ ಮುನಿರತ್ನ ಸಿಎಂ ಬಳಿ ಟಿಕೆಟ್ ಘೋಷಣೆಯಾಗದೇ ಇರುವ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸಿದ್ದರು.
ಇತ್ತ ಸಚಿವರಾದ ಸುಧಾಕರ್, ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್, ರಮೇಶ್ ಜಾರಕಿಹೊಳಿ ಮುನಿರತ್ನ ಪರ ಬ್ಯಾಟಿಂಗ್ ಬೀಸಿದ್ದರು. ಇದೀಗ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುವ ಮೂಲಕ ಅಭ್ಯರ್ಥಿ ಸಂಬಂಧ ಇದ್ದ ಅನಿಶ್ಚಿತತೆಗೆ ತೆರೆ ಎಳೆದಿದೆ.
ಇದರ ಜತೆಗೆ ಉತ್ತರ ಪ್ರದೇಶದ ಆರು ಉಪಚುನಾವಣೆ ಕ್ಷೇತ್ರ ಹಾಗೂ ಒಂದು ನಾಗಾಲ್ಯಾಂಡ್ ಕ್ಷೇತ್ರಕ್ಕೂ ಅಭ್ಯರ್ಥಿ ಹೆಸರು ಘೋಷಣೆ ಮಾಡಿ ಬಿಜೆಪಿ ಆದೇಶ ಹೊರಡಿಸಿದೆ.