ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಫೋಟೋ ಪ್ರಕಟಿಸಿ ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿ ಪ್ರಚಾರ ಮಾಡಿತ್ತು. ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಫೋಟೋ ಪ್ರಕಟಿಸಿ ಕಾಣೆಯಾಗಿದ್ದಾರೆ, ಹುಡುಕಿಕೊಡಿ ಎಂದು ಪೋಸ್ಟರ್ ವಾರ್ ಶುರು ನಡೆಸಿದೆ.
ಡಿಯರ್ ಕಾಂಗ್ರೆಸ್, ಗೃಹಲಕ್ಷ್ಮಿಯರ ಕಿವಿ ಮೇಲೆ ಹೂವಿಟ್ಟು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಕಾಣೆಯಾಗಿದ್ದಾರೆ. ದಯವಿಟ್ಟು ಅವರನ್ನು ಹುಡುಕಿಕೊಡಿ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟರ್ ಪ್ರಕಟಿಸಿದೆ. ಇತ್ತೀಚೆಗಷ್ಟೇ ಎಟಿಎಂ ಸರ್ಕಾರದ ಕೇಂದ್ರಬಿಂದು ರಾಹುಲ್ ಗಾಂಧಿ ಎಂದು ಗಂಭೀರ ಆರೋಪ ಮಾಡಿದ್ದ ಬಿಜೆಪಿ ರಾಜ್ಯದಿಂದ ಆಗುವ ಹಣದ ಕಲೆಕ್ಷನ್ ಕುರಿತು ವಂಶಾವಳಿ ಪೋಸ್ಟರ್ ಬಿಡುಗಡೆ ಮಾಡಿತ್ತು.
ಇದನ್ನೂ ಓದಿ :ಕಾಂಗ್ರೆಸ್ ಸರ್ಕಾರದ ಎಟಿಎಂ ಕಲೆಕ್ಷನ್ನ ವಂಶಾವಳಿ ಹೆಸರಿನ ಪೋಸ್ಟರ್ ರಿಲೀಸ್ ಮಾಡಿದ ಕೇಸರಿ ಪಡೆ
ಲಕ್ಷೀ ಹೆಬ್ಬಾಳ್ಕರ್ ವಿರುದ್ದ ಕಿಡಿಕಾರಿರುವ ಬಿಜೆಪಿ, ಮರ್ಯಾದೆ-ಮುಜುಗರ ಇವುಗಳನ್ನು ಮೂಟೆಯಲ್ಲಿ ಕಟ್ಟಿಟ್ಟ ನಂತರವೇ ಕೆಪಿಸಿಸಿ ಅಧ್ಯಕ್ಷರು ಬೆಳಗಾವಿ ರಾಜಕಾರಣಕ್ಕೆ ಕೈ ಹಾಕಿದ್ದಾರೆ. ಇದು ನಮ್ಮ ಆರೋಪವಲ್ಲ, ಕಾಂಗ್ರೆಸಿಗರೇ ಒಪ್ಪಿರುವ ಸತ್ಯ. ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಪಕ್ಷದ 135 ಶಾಸಕರ ಪೈಕಿ, ಹೊಸದಾಗಿ ಗೆದ್ದಿರುವ 70 ಶಾಸಕರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರಂತೆ, ಇದನ್ನು ಹೇಳಿದ್ದು ನಾವಲ್ಲ. ನಿಮ್ಮದೇ ಪಕ್ಷದ ಶಾಸಕ ಚನ್ನಗಿರಿಯ ಶಿವಗಂಗಾ ಬಸವರಾಜು. 135 ರಲ್ಲಿ 70 ಜನ ಅವರ ಬೆಂಬಲಿಗರಾದರೆ, ನಿಮ್ಮ ಬೆಂಬಲಿಗರ ಸಂಖ್ಯೆ ಎಷ್ಟು? ಇದನ್ನೆಲ್ಲಾ ಗಮನಿಸಿದರೆ, ನೀವು ಶಾಸಕರ ಆಯ್ಕೆಯಿಂದಾದ ಸಿಎಂ ಅಲ್ಲ, ಬದಲಿಗೆ ಹೈಕಮಾಂಡ್‌ಗೆ ಬ್ಲಾಕ್ ಮೇಲ್ ಮಾಡಿ ಅಥವಾ ಬ್ಲ್ಯಾಂಕ್ ಚೆಕ್ ನೀಡಿ ಸಿಎಂ ಆದವರು ಎಂಬುದಂತು ಸ್ಪಷ್ಟ ಎಂದಿದೆ.
ಡಿಸಿಎಂ ವಿರುದ್ಧ ಪೋಸ್ಟರ್: ಕೆಲವು ದಿನಗಳ ಹಿಂದೆ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಪೋಸ್ಟರ್ ಪ್ರಕಟಿಸಿ, ಮೈತ್ರಿ ಉಳಿಸಿಕೊಳ್ಳಲು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕಟ್ಟಪ್ಪಣೆ ಮೇರೆಗೆ ಕಾವೇರಿ ನೀರು ಹರಿಸಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಾಣೆಯಾಗಿದ್ದಾರೆ. ಇವರನ್ನು ಹುಡುಕಿಕೊಟ್ಟವರಿಗೆ ಐದು ಗ್ಯಾರಂಟಿಗಳು ಉಚಿತ ಖಚಿತ ನಿಶ್ಚಿತ ಎಂದು ವ್ಯಂಗ್ಯವಾಡಿತ್ತು.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ 'ರಾಜ್ಯ ಸರ್ಕಾರದ ಎಟಿಎಂ ಕಲೆಕ್ಷನ್ನ ಕೇಂದ್ರ ಬಿಂದು ದೆಹಲಿಯ ಹೈಕಮಾಂಡ್. ರಾಹುಲ್ ಗಾಂಧಿ ಅವರೇ ಈ ಕಲೆಕ್ಷನ್ ಸರ್ಕಾರದ ಮುಖ್ಯಸ್ಥ, ಎಲ್ಲ ವಸೂಲಿ ಹಣದ ನಿರ್ವಹಣೆ ಮಾಡೋದು ರಾಹುಲ್ ಗಾಂಧಿ ಅವರೇ'' ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಗಂಭೀರ ಆರೋಪ ಮಾಡಿ ಎಟಿಎಂ ಸರ್ಕಾರದ ಕಲೆಕ್ಷನ್ ವಂಶಾವಳಿ ಹೆಸರಿನ ದೊಡ್ಡ ಎಂಬ ಪೋಸ್ಟರ್ ರಿಲೀಸ್ ಮಾಡಿದ್ದರು.
ಇದನ್ನೂ ಓದಿ:ಕಾವೇರಿ ನೀರು ಬಿಟ್ಟು ಕಾಣೆಯಾದ ಡಿಕೆಶಿ ಹುಡುಕಿಕೊಡುವಂತೆ ಬಿಜೆಪಿ ಪೋಸ್ಟರ್ ಬಿಡುಗಡೆ