ಬೆಂಗಳೂರು :ಕಲೆಕ್ಷನ್ ಮಾಸ್ಟರ್ ಎನ್ನುವ ಬರಹವುಳ್ಳ ಸೂಟ್ ಕೇಸ್ ಕೈಯಲ್ಲಿ ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಅಕ್ಕಪಕ್ಕದಲ್ಲಿ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಫೋಟೋಗಳುಳ್ಳ ಪೋಸ್ಟರ್ ಅನ್ನು ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿ ಎಟಿಎಂ ಸರ್ಕಾರ ಎಂದು ಟೀಕಿಸಿದೆ.
ಸ್ವಾಭಿಮಾನಿ ಕನ್ನಡಿಗರ ಸ್ವಾವಲಂಬನೆಯ ದುಡಿಮೆಯ ತೆರಿಗೆ ಹಣವನ್ನು ಪಂಚ ರಾಜ್ಯಗಳ ಚುನಾವಣೆಗೆ ಹಂಚುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವ್ಯಂಗ್ಯಚಿತ್ರ ಪ್ರಕಟಿಸಿದೆ. ಅಲ್ಲದೆ, ಸಮಗ್ರ ಭ್ರಷ್ಟಾಚಾರಕ್ಕಾಗಿ ವಿಧಾನಸೌಧವನ್ನು ಭ್ರಷ್ಟಾಚಾರದ ಹೆಡ್ ಆಫೀಸ್ ಮಾಡಿಕೊಂಡು ಪಂಚರಾಜ್ಯ ಚುನಾವಣೆಗೆ ಭರಪೂರ ಫಂಡಿಂಗ್ ಮಾಡುವ ಹೊಣೆ ಹೊತ್ತಿರುವ ಕರ್ನಾಟಕದ ಕಲೆಕ್ಷನ್ ಮಾಸ್ಟರ್ಸ್ ಇವರ ಎಂದು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಹೆಗಲ ಮೇಲೆ ಕೈಹಾಕಿ ನಿಂತಿರುವ ಫೋಟೋಗಳನ್ನು ಐದು ನೂರು ರೂ.ಗಳ ನೋಟಿನ ಫೋಟೋಗಳಿಂದ ರಚಿಸಿ ಪ್ರಕಟಿಸಿದೆ. ಅದಕ್ಕೆ ಕಲೆಕ್ಷನ್ ಮಾಸ್ಟರ್ ಎನ್ನುವ ತಲೆ ಬರಹ ನೀಡಿದೆ.
ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ಗೆ ಕೊಟ್ಟಿರುವ ಮೊದಲನೇ ಹಂತದ ₹1000 ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು? ತೆಲಂಗಾಣ ಕಾಂಗ್ರೆಸ್‌ಗೆ 300 ಕೋಟಿ ರೂ, ಮಿಜೋರಾಂ ಕಾಂಗ್ರೆಸ್‌ಗೆ 100 ಕೋಟಿ ರೂ. ಛತ್ತಿಸ್‌ಗಢ ಕಾಂಗ್ರೆಸ್‌ಗೆ 200 ಕೋಟಿ ರೂ. ರಾಜಸ್ಥಾನ ಕಾಂಗ್ರೆಸ್‌ಗೆ 200 ಕೋಟಿ ರೂ. ಮಧ್ಯಪ್ರದೇಶ ಕಾಂಗ್ರೆಸ್‌ಗೆ 200 ಕೋಟಿ ರೂ. ಕಮಿಷನ್, ಕಲೆಕ್ಷನ್ ಮೂಲಕ ಸಾವಿರ ಕೋಟಿ ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಹಣ ಹಂಚುವ ಮುನ್ನವೇ ಸಿಕ್ಕಿ ಬಿದ್ದಿದೆ ಎಂದು ವಾಗ್ದಾಳಿ ನಡೆಸಿದೆ.
25 ಲಕ್ಷ ಕೊಡ್ಲೇಬೇಕು ಅಬಕಾರಿ ನೀತಿ :ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಕೋಟಿ ಕೋಟಿ ರೂ.ಗೆ ಅಬಕಾರಿ ಹುದ್ದೆಗಳನ್ನು ಸೇಲ್‌ಗೆ ಇಟ್ಟಿದ್ದ ಲೂಟಿಕೋರ ರಾಜ್ಯ ಕಾಂಗ್ರೆಸ್ ಸರ್ಕಾರ, ಅಬಕಾರಿ ಇಲಾಖೆಯನ್ನು ಭ್ರಷ್ಟಾಚಾರದ ಹೆಬ್ಬಾಗಿಲು ಮಾಡಿಕೊಂಡಿದೆ. ಲೈಸೆನ್ಸ್ ಟ್ರಾನ್ಸ್‌ಫರ್, ಲೈಸೆನ್ಸ್ ಶಿಫ್ಟಿಂಗ್‌ಗೆ ಲಕ್ಷ ಲಕ್ಷ ಹಣಕ್ಕೆ ಅಧಿಕಾರಿಗಳು ರಾಜಾರೋಷವಾಗಿ ಕೈ ಚಾಚುತ್ತಿರುವುದು ಎಟಿಎಂ ಸರ್ಕಾರಕ್ಕಾಗಿಯೇ. ರಾಜ್ಯದಲ್ಲಿ ಈ ಪರಿ ಭ್ರಷ್ಟಾಚಾರವನ್ನು ನೋಡಿದರೆ, ನೀವು ತಿನ್ನಿ ನಮಗೂ ಕೊಡಿ ಎನ್ನುವ ಅನಧಿಕೃತ ಆದೇಶವನ್ನು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಹೊರಡಿಸಿದಂತಿದೆ ಎಂದು ಬಿಜೆಪಿ ಆರೋಪಿಸಿದೆ.